ಮೇಕ್ ಇನ್ ಇಂಡಿಯಾ ಬೆಂಕಿ ಅನಾಹುತ: ಸಂಘಟಕರ ವಿರುದ್ಧ ನಿರ್ಲಕ್ಷ ಪ್ರಕರಣ

Update: 2016-02-26 18:29 GMT

ಮುಂಬೈ, ಫೆ.26: ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ವೇಳೆ ನಡೆದಿದ್ದ ಬೆಂಕಿ ಅನಾಹುತದ ಸಂಬಂಧ ಸಂಘಟಕರ ವಿರುದ್ಧ ನಿರ್ಲಕ್ಷದ ಪ್ರಕರಣವನ್ನು ದಾಖಲಿಸಲಾಗಿದೆ.

ಮುಂಬೈಯ ಗಿರಗಾಂವ್ ಚೌಪಾಟಿಯಲ್ಲಿ ಫೆ.14ರಂದು ನಡೆದ ‘ಮೇಕ್ ಇನ್ ಇಂಡಿಯಾ’ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಅನಾಹುತ ಸಂಭವಿಸಿತ್ತು. ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಹಲವು ಮಂದಿ ಖ್ಯಾತನಾಮರು ಈ ವೇಳೆ ಅಲ್ಲಿದ್ದರು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲವಾದರೂ ರೂ.5 ಕೋಟಿಯಷ್ಟು ನಷ್ಟ ಸಂಭವಿಸಿದೆ.

ಬೆಂಕಿ ಅನಾಹುತಕ್ಕಾಗಿ ಸಂಘಟಕ ಸಂಸ್ಥೆ ವಿಜ್‌ಕ್ರಾಫ್ಟನ್ನು ದೂರಲಾಗಿದೆ. ಸಂಘಟಕರ ನಿರ್ಲಕ್ಷವೇ ಅದಕ್ಕೆ ಕಾರಣವೆಂದು ಅಗ್ನಿ ಶಾಮಕ ಇಲಾಖೆಯ ವರದಿ ಆರೋಪಿಸಿದೆ.

ಎಲ್ಲ ಸುರಕ್ಷಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತೆಂದು ವಿಜ್‌ಕ್ರಾಫ್ಟ್ ಇಂಟರ್ನ್ಯಾಶನಲ್ ಎಂಟರ್ಟೈನ್‌ಮೆಂಟ್ ಪ್ರತಿಪಾದಿಸಿದರೆ, ಅಗ್ನಿ ಶಾಮಕ ಇಲಾಖೆಯ ವರದಿ ಬೇರೆಯೇ ಹೇಳುತ್ತಿದೆ. ವೇದಿಕೆಯ ಅಡಿಯಿಂದ ಬೆಂಕಿ ಆರಂಭವಾಗಿತ್ತು. ಆದರೆ, ಅದರ ಸುತ್ತಲಿದ್ದ ರಾಸಾಯನಿಕ ಅಂಟಿನ ಕಾರಣದಿಂದಾಗಿ ಅದು ವೇಗವಾಗಿ ಹಬ್ಬಿತ್ತು. ಸಂಘಟಕರು ‘ಸೂಚನೆಯನ್ನು ಅನುಸರಿಸಲಿಲ್ಲ.’ ಎಂದು ಅದು ತಿಳಿಸಿದೆ.

ದೋಷ ಪೂರಿತ ವಿದ್ಯುತ್ ಸರ್ಕ್ಯೂಟ್ ಬೆಂಕಿಗೆ ಸಂಭಾವ್ಯ ಕಾರಣವಾಗಿದೆ. ವಿದ್ಯುತ್ ವಯರ್‌ಗಳಿಂದ ಎದ್ದ ಬೆಂಕಿ ವೇದಿಕೆಯ ಅಡಿಯಲಿದ್ದ ಉರಿಯ ಬಲ್ಲ ವಸ್ತುಗಳಿಗೆ ತಗಲಿತು. ಭಾರೀ ದಹನಶೀಲ ವಸ್ತಗಳನ್ನು ವೇದಿಕೆಯ ಅಡಿಯಲ್ಲಿ ಶೇಖರಿಸಿಟ್ಟಿದ್ದುದು ಸಂಘಟಕರು ನಿರ್ಲಕ್ಷದ ಪುರಾವೆಯಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News