×
Ad

ಜೆ ಎನ್ ಯು ಪ್ರಕರಣ : ಟೀಕೆಗಳಿಂದ ಕಂಗೆಟ್ಟ ಕೇಂದ್ರ ಸರಕಾರದಿಂದ ದಿಲ್ಲಿ ಪೋಲೀಸರ ' ವಿಚಾರಣೆ ' ?

Update: 2016-02-27 13:05 IST

ನವದೆಹಲಿ : ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿವಾದವನ್ನು ನಿಭಾಯಿಸಿದ ರೀತಿಗೆ ವಿಪಕ್ಷಗಳಿಂದ ಹಾಗೂನಾಗರಿಕ ಸಮಾಜದಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕೇಂದ್ರ ಸರಕಾರ ಈಗ ಪರಿಸ್ಥಿತಿಯನ್ನು ಸುಧಾರಿಸಲು ಯತ್ನಗಳನ್ನು ಮಾಡಲಾರಂಭಿಸಿದೆ.

ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ದೆಹಲಿ ಪೊಲೀಸರಿಂದ ಘಟನೆಯ ವರದಿ ಕೇಳಿದ್ದ ಕೇಂದ್ರ ಇದೀಗ ಖಾಸಗಿ ಚಾನೆಲ್ ಒಂದು ಪ್ರಸಾರ ಮಾಡಿದ ವೀಡಿಯೋವನ್ನು ಪೊಲೀಸರೇಕೆ ಅವಲಂಬಿಸಿದರು ಎಂದು ಕೇಳಲಿದ್ದಾರೆಂದು ತಿಳಿದು ಬಂದಿದೆ.

ಈಗಾಗಲೇ ವರದಿಯಾಗಿರುವಂತೆ ಕಾರ್ಯಕ್ರಮದಸಂದರ್ಭ ಅಲ್ಲಿ ಪೊಲೀಸ್ ತಂಡವಿದ್ದರೂ ಕನ್ಹಯ್ಯ ವಿರುದ್ಧ ದೇಶದ್ರೋಹದ ಆರೋಪವನ್ನು ಎರಡು ದಿನಗಳ ನಂತರ ಅದು ಕೂಡ ಝೀ ನ್ಯೂಸ್ ಈ ಬಗ್ಗೆ ವರದಿ ಮಾಡಿದ ನಂತರವಷ್ಟೇ ದಾಖಲಿಸಲಾಗಿತ್ತು.

ನಿಯಮಗಳ ಪ್ರಕಾರ ಇಂತಹ ಸಂದರ್ಭಗಳಲ್ಲಿ ಪೊಲೀಸರು ತಮ್ಮೊಂದಿಗೆ ವೀಡಿಯೋ ರೆಕಾರ್ಡಿಂಗ್‌ಸಾಧನಗಳನ್ನು ಕೊಂಡೊಯ್ಯಬೇಕಾಗಿದೆ.

ಈ ಬಗ್ಗೆ ದೆಹಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿಯವರನ್ನು ಸಂಪರ್ಕಿಸಿದಾಗ ‘‘ನಮ್ಮಲ್ಲಿ ದೇಶದ್ರೋಹದ ಆರೋಪಕ್ಕೆ ಬೇರೆ ಪುರಾವೆಗಳಿವೆ,’’ಎಂದು ಹೇಳಿದರು. ಪೊಲೀಸರೇಕೆ ಕ್ಯಾಮರಾ ಕೊಂಡೊಯ್ಯಿಲ್ಲವೆಂದು ಕೇಳಿದಾಗ ‘‘ದೆಹಲಿ ಪೊಲೀಸರ ಬಳಿಯಿರುವ ಕ್ಯಾಮರಾ ಹವ್ಯಾಸಿಗಳು ಉಪಯೋಗಿಸುವಂತಹದ್ದು. ಆದರೆ ಚಾನೆಲ್ಲುಗಳ ವೀಡಿಯೋಗ್ರಾಫಿಯನ್ನು ವೃತ್ತಿಪರರು ಮಾಡಿರುತ್ತಾರಾದುದರಿಂದ ಅದರ ಗುಣಮಟ್ಟ ಉತ್ತಮವಾಗಿರುತ್ತದೆ.ಈ ಘಟನೆ ಸಂಬಂಧ ವೀಡಿಯೋ ದೃಶ್ಯಾವಳಿ ಹಲವು ಪುರಾವೆಗಳಲ್ಲಿ ಒಂದು ಮಾತ್ರ,’’ ಎಂದು ಹೇಳಿದರು.

ಜೆಎನ್‌ಯು ವಿಚಾರದಲ್ಲಿ ತಪ್ಪುಗಳನ್ನುತಿದ್ದಲು ಹಾಗೂ ಈ ಪ್ರಕರಣವನ್ನು ಸರಿಯಾಗಿ ನಿಬಾಯಿಸದಿರುವುದಕ್ಕೆ ಸಂಬಂಧಿತರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು, ಎಂದು ಗೃಹ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

‘‘ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರಾದರೂ ಅವರೇಕೆ ಇಡೀ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಅವರನ್ನು ಪ್ರಶ್ನಿಸಲಾಗುವುದು.ಈ ಬಗ್ಗೆ ಸಂಪೂರ್ಣ ವರದಿಯನ್ನು ನಾವು ಕೇಳಿದ್ದೇವೆ,’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಸಚಿವಾಲಯಕ್ಕೆ ವರದಿ ಕಳುಹಿಸಲಾಗಿದೆ ಹಾಗೂ ನಮ್ಮ ಕಡೆಯಿಂದ ಎಲ್ಲವೂ ಸರಿಯಾಗಿ ನಡೆದಿದೆ,’’ಎಂದು ನಾವು ತಿಳಿಸಿದ್ದೇವೆಂದು ಬಸ್ಸಿ ಹೇಳಿದ್ದಾರೆ. ಝೀ ಚಾನೆಲ್ಲಿನ ವೀಡಿಯೋವನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದು ಅದರ ವರದಿ ಇನ್ನಷ್ಟೇ ಬರಬೇಕಿದೆ,’’ಎಂದೂ ಅವರು ತಿಳಿಸಿದರು.

ಝೀ ವಾಹಿನಿಯ ನ್ಯೂಸ್ ಪ್ರೊಡ್ಯೂಸರ್ ವಿಶ್ವ ದೀಪಕ್ ಈ ವಿವಾದ ಸಂಬಂಧ ಈಗಾಗಲೇ ರಾಜೀನಾಮೆ ನೀಡಿದ್ದು ಇಡೀ ಪ್ರಕರಣವನ್ನು ತಾರತಮ್ಯ ದೃಷ್ಟಿಯಂದ ಪ್ರಸಾರಮಾಡಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ಫೇಸ್ಬುಕ್ ಪುಟದಲ್ಲಿ ಅವರು ಹೀಗೆ ಬರೆದಿದ್ದಾರೆ : ‘‘ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯೇ ಇರದ ವೀಡಿಯೋವನ್ನು ಇನ್ನೂ ಪ್ರಸಾರ ಮಾಡಲಾಗುತ್ತಿದೆ. ಕತ್ತಲಲ್ಲಿ ಕೇಳಿ ಬಂದ ಆ ಧ್ವನಿಗಳು ಕನ್ಹಯ್ಯಾಅಥವ ಆತನ ಗೆಳೆಯರದ್ದೆಂದು ನಾವು ಹೇಗೆ ಕಣ್ಮುಚ್ಚಿ ನಂಬಿ ಬಿಟ್ಟೆವು. ‘ಭಾರ್ತೀಯ ಕೋರ್ಟ್ ಜಿಂದಾಬಾದ್’ ಬದಲು ಅವರಿಗೆ ‘ಪಾಕಿಸ್ತಾನ್ ಜಿಂದಾಬಾದ್’ ಕೇಳಿಸಿತ್ತು. ಇದು ಕೆಲವು ಜನರ ಭವಿಷ್ಯವನ್ನು ಹಾಳು ಮಾಡಿದೆಯಲ್ಲದೆ ಅವರ ಕುಟುಂಬಗಳಿಗೆ ಆಘಾತ ನೀಡಿವೆ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News