ಆ್ಯಪಲ್ ವಿರುದ್ಧ ಸ್ಯಾಮ್ಸಂಗ್ ಗೆಲುವಿನ ನಗೆ
ವಾಶಿಂಗ್ಟನ್, ಫೆ. 27: ಸ್ಯಾಮ್ಸಂಗ್ ಮತ್ತು ಆ್ಯಪಲ್ ಕಂಪೆನಿಗಳ ನಡುವೆ ಹಕ್ಕುಸ್ವಾಮ್ಯಕ್ಕಾಗಿ ನಡೆಯುತ್ತಿದ್ದ ಸುದೀರ್ಘ ಸಮರದಲ್ಲಿ ಸ್ಯಾಮ್ಸಂಗ್ ಅಂತಿಮವಾಗಿ ವಿಜಯದ ನಗೆ ಬೀರಿದೆ.
ದಕ್ಷಿಣ ಕೊರಿಯದ ತಾಂತ್ರಿಕ ದೈತ್ಯ (ಸ್ಯಾಮ್ಸಂಗ್), ಐಫೋನ್ ತಯಾರಕ ಸಂಸ್ಥೆ (ಆ್ಯಪಲ್)ಗೆ 119.6 ಮಿಲಿಯ ಡಾಲರ್ (ಸುಮಾರು 822 ಕೋಟಿ ರೂಪಾಯಿ) ಮೊತ್ತ ಪರಿಹಾರ ನೀಡಬೇಕೆಂಬ ವಿಚಾರಣಾ ನ್ಯಾಯಾಲಯವೊಂದರ ಆದೇಶವನ್ನು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ತಳ್ಳಿಹಾಕಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆ್ಯಪಲ್ ಕಂಪೆನಿಯ ಎರಡು ಪೇಟೆಂಟ್‌ಗಳು ಸಿಂಧುವಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಆ್ಯಪಲ್ 2012ರಲ್ಲಿ ಸ್ಯಾಮ್ಸಂಗ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದ ಹಲವಾರು ಪೇಟೆಂಟ್‌ಗಳನ್ನು ಸ್ಯಾಮ್ಸಂಗ್ ಉಲ್ಲಂಘಿಸಿದೆ ಎಂದು ಅದು ಆರೋಪಿಸಿತ್ತು.
ತಾನು ಯಾವುದೇ ರೀತಿಯ ಪೇಟೆಂಟ್ ಉಲ್ಲಂಘನೆ ನಡೆಸಿಲ್ಲ ಎಂದು ಸ್ಯಾಮ್ಸಂಗ್ ವಾದಿಸಿತು ಹಾಗೂ ತನ್ನ ಕೆಲವು ಪೇಟೆಂಟ್‌ಗಳನ್ನು ಆ್ಯಪಲ್ ಉಲ್ಲಂಘಿಸಿದೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿತ್ತು.
ವಿಚಾರಣಾ ನ್ಯಾಯಾಲಯದಲ್ಲಿ ಆ್ಯಪಲ್ 2.2 ಬಿಲಿಯ ಡಾಲರ್ (ಸುಮಾರು 15,118 ಕೋಟಿ ರೂಪಾಯಿ) ನಷ್ಟ ಪರಿಹಾರವನ್ನು ಸ್ಯಾಮ್ಸಂಗ್‌ನಿಂದ ಕೋರಿತ್ತು. ಆದರೆ, ವಿಚಾರಣಾ ನ್ಯಾಯಾಲಯವು 119.6 ಮಿಲಿಯ ಡಾಲರ್ ಪರಿಹಾರವನ್ನಷ್ಟೇ ನೀಡಿತ್ತು.
ಅದೇ ವೇಳೆ, ಸ್ಯಾಮ್ಸಂಗ್‌ನ ಪೇಟೆಂಟೊಂದನ್ನು ಉಲ್ಲಂಘಿಸಿರುವುದಕ್ಕಾಗಿ ಆ್ಯಪಲ್ ಸ್ಯಾಮ್ಸಂಗ್‌ಗೆ 1,58,500 ಡಾಲರ್ (ಸುಮಾರು 1.09 ಕೋಟಿ ರೂಪಾಯಿ) ಪರಿಹಾರವನ್ನು ನೀಡಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮೇಲ್ಮನವಿ ನ್ಯಾಯಾಲಯ ಎತ್ತಿಹಿಡಿಯಿತು.