×
Ad

12 ವರ್ಷಗಳ ಹಿಂದಿನ ಶೀತಲೀಕೃತ ಭ್ರೂಣದಿಂದ ಪ್ರಣಾಳ ಶಿಶು ಜನನ

Update: 2016-02-27 23:09 IST

ಬೀಜಿಂಗ್, ಫೆ. 27: ಚೀನಾದ ಶಾಂಕ್ಸಿ ರಾಜ್ಯದಲ್ಲಿ 12 ವರ್ಷಗಳ ಹಿಂದೆ ಶೀತಲೀಕರಿಸಿದ ಭ್ರೂಣದಿಂದ ಆರೋಗ್ಯವಂತ ಶಿಶುವೊಂದು ಜನಿಸಿದೆ. ದೇಶದ ಅತ್ಯಂತ ದೀರ್ಘ ಕಾಲ ಸಂರಕ್ಷಿಸಲ್ಪಟ್ಟ ಪ್ರಣಾಳ ಶಿಶು ಎಂಬ ಹೆಗ್ಗಳಿಕೆಯನ್ನು ಈ ಶಿಶು ಪಡೆದುಕೊಂಡಿದೆ.

40 ವರ್ಷದ ಲಿ ಎಂಬ ಮಹಿಳೆ ಪ್ರಾಂತಿಯ ರಾಜಧಾನಿ ಕ್ಸಿಯನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಬುಧವಾರ ಬೆಳಗ್ಗೆ ತನ್ನ ಎರಡನೆ ಮಗನಿಗೆ ಜನ್ಮ ನೀಡಿದರು.

ಅವರಿಗೆ ಸಾಮಾನ್ಯ ರೀತಿಯಲ್ಲಿ ಗರ್ಭಧರಿಸುವಿಕೆಯಲ್ಲಿ ಸಮಸ್ಯೆಯಿತ್ತು. ಪ್ರಣಾಳ ಶಿಶು (ಟೆಸ್ಟ್ ಟ್ಯೂಬ್) ತಂತ್ರಜ್ಞಾನದ ಮೂಲಕ ಗರ್ಭ ಧರಿಸಲು ಲಿ 2003ರಿಂದ ಪ್ರಯತ್ನಿಸಿದರು.

 ಆ ವರ್ಷ ವೈದ್ಯರು ಮಹಿಳೆಯ 12 ಅಂಡಗಳನ್ನು ಸಂಗ್ರಹಿಸಿದರು ಹಾಗೂ ಅವರ ಗಂಡನ ವೀರ್ಯದೊಂದಿಗೆ 12 ಭ್ರೂಣಗಳನ್ನು ಸೃಷ್ಟಿಸಿದರು. ಅವುಗಳ ಪೈಕಿ ಎರಡು ಭ್ರೂಣಗಳನ್ನು ಮಹಿಳೆಯ ಗರ್ಭಾಶಯದೊಳಕ್ಕೆ ಸೇರಿಸಿದರು. ಏಳು ಭ್ರೂಣಗಳನ್ನು ಶೀತಲೀಕರಿಸಿದರು.

2004ರಲ್ಲಿ ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು.

ಕಳೆದ ವರ್ಷ ಚೀನಾ ಒಂದೇ ಮಗು ನೀತಿಯನ್ನು ಸಡಿಲಿಸಿದಾಗ, ಎರಡನೆ ಮಗುವನ್ನು ಪಡೆಯಲು ಆಕೆ ನಿರ್ಧರಿಸಿದರು. ಈ ಸುದೀರ್ಘ ಅವಧಿಯಲ್ಲಿ ಮೂರು ಭ್ರೂಣಗಳು ಜೀವಂತವಾಗಿ ಉಳಿದಿದ್ದವು. ಅವುಗಳ ಪೈಕಿ ಅತ್ಯುತ್ತಮ ಎರಡನ್ನು ವೈದ್ಯರು ಆಕೆಯ ಗರ್ಭಾಶಯದೊಳಕ್ಕೆ ಸೇರಿಸಿದರು. ಅವುಗಳ ಪೈಕಿ ಒಂದು ಬದುಕುಳಿಯಿತು.

‘‘ನಮ್ಮ ಮೊದಲ ಮಗನಿಗೆ ಈಗ 12 ವರ್ಷ. ಮುಂದೆ ಯಾವಾಗಲಾದರೂ ಎರಡನೆ ಮಗುವನ್ನು ಪಡೆಯುವ ಉದ್ದೇಶದಿಂದ ಭ್ರೂಣಗಳನ್ನು ಸಂರಕ್ಷಿಸಿಡಲಾಗಿತ್ತು. ಅದೃಷ್ಟವಶಾತ್ ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ’’ ಎಂದು ಮಹಿಳೆಯ ಗಂಡ ಹೇಳಿದ್ದಾರೆ.

ಮೊದಲ ಪ್ರಣಾಳ ಶಿಶು

ಜಗತ್ತಿನ ಮೊದಲ ಪ್ರಣಾಳ ಶಿಶು ಲೂಯಿಸ್ ಬ್ರೌನ್ ಜನಿಸಿದ್ದು ಬ್ರಿಟನ್‌ನಲ್ಲಿ 1978ರಲ್ಲಿ.

ಅಂದಿನಿಂದ ಸುಮಾರು 50 ಲಕ್ಷ ಪ್ರಣಾಳ ಶಿಶುಗಳು ಜನಿಸಿವೆ.

ಭಾರತದ ಮೊದಲ ಪ್ರಣಾಳ ಶಿಶು ದುರ್ಗಾ ಸೃಷ್ಟಿಕರ್ತನ ದುರಂತ ಅಂತ್ಯ

ಭಾರತದ ಮೊದಲ ಹಾಗೂ ಜಗತ್ತಿನ ಎರಡನೆ ಪ್ರಣಾಳ ಶಿಶು ದುರ್ಗಾ ಜನಿಸಿದ್ದು ಜಗತ್ತಿನ ಮೊದಲ ಪ್ರಣಾಳ ಶಿಶು ಲೂಯಿಸ್ ಬ್ರೌನ್ ಬ್ರಿಟನ್‌ನಲ್ಲಿ ಜನಿಸಿದ 67 ದಿನಗಳ ಬಳಿಕ. ಅಂದರೆ 1978 ಅಕ್ಟೋಬರ್ 3 ರಂದು.

ಈ ಸಾಧನೆಯ ರೂವಾರಿ ಕೋಲ್ಕತದ ವೈದ್ಯ ಸುಭಾಶ್ ಮುಖೋಪಾಧ್ಯಾಯ.

ಆದರೆ, ದುರದೃಷ್ಟವಶಾತ್ ರಾಜ್ಯ ಸರಕಾರ ಈ ಜೀವ ವಿಜ್ಞಾನಿಗೆ ಕಿರುಕುಳ ನೀಡಿತು ಹಾಗೂ ತನ್ನ ಸಾಧನೆಯನ್ನು ಅಂತಾರಾಷ್ಟ್ರೀಯ ವಿಜ್ಞಾನ ಸಮುದಾಯದೊಂದಿಗೆ ಹಂಚಿಕೊಳ್ಳಲು ಸರಕಾರ ಅವಕಾಶ ಕೊಡಲಿಲ್ಲ.

ಇದರಿಂದ ರೋಸಿದ ಸುಭಾಶ್ ಮುಖೋಪಾಧ್ಯಾಯ 1981 ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡರು.

ಅವರ ಬದುಕು, ಸಾಧನೆ ಮತ್ತು ಸಾವಿನ ಕಥಾವಸ್ತುವನ್ನೊಳಗೊಂಡ ಹಿಂದಿ ಚಿತ್ರ ‘ಏಕ್ ಡಾಕ್ಟರ್ ಕಿ ವೌತ್’ 1990ರಲ್ಲಿ ತೆರೆ ಕಂಡಿದೆ. ಬಂಗಾಳಿ ನಿರ್ದೇಶಕ ತಪನ್ ಸಿನ್ಹಾ ನಿರ್ದೇಶನದ ಚಿತ್ರದಲ್ಲಿ ಪಂಕಜ್ ಕಪೂರ್, ಶಬಾನಾ ಅಝ್ಮಿ, ಇರ್ಫಾನ್ ಖಾನ್ ಮುಂತಾದವರು ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News