×
Ad

ಬಿಜೆಪಿ ವಿರುದ್ಧ ಬಿಎಸ್ಪಿ ನಾಯಕಿ ಮಾಯಾವತಿಯ ಪ್ರಬಲ ಅಸ್ತ್ರ

Update: 2016-02-27 23:45 IST

ಲಕ್ನೊ, ಫೆ.27: ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ದಲಿತರ ಮತಗಳನ್ನು ಕ್ರೋಡೀಕರಿಸಲು ಬಿಎಸ್ಪಿ ‘ಮಹಿಷಾಸುರ ಹುತಾತ್ಮತೆಯ’ ವಿವಾದವನ್ನು ಬಳಸಲಿದೆ. ಈ ಬಗ್ಗೆ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವೆ ಸ್ಮತಿ ಇರಾನಿ ಕೆಳ ಜಾತಿಗಳನ್ನು ಅವಮಾನಿಸಿದ್ದಾರೆಂದು ಪಕ್ಷದ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.

2017ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುವ ಗುರಿಯಿರಿಸಿರುವ ಬಿಜೆಪಿಯ ವಿರುದ್ಧ ಬಿಎಸ್ಪಿಯು ಪ್ರಬಲ ಅಸ್ತ್ರವೊಂದನ್ನು ಕಂಡುಕೊಂಡಿರುವ ಸಾಧ್ಯತೆಯಿದೆಯೆಂದು ಬಿಎಸ್ಪಿಯ ಮೂಲಗಳು ತಿಳಿಸಿವೆ.
ಸ್ಮತಿ ಇರಾನಿ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ದಲಿತರು ಹಾಗೂ ಬುಡಕಟ್ಟು ಜನರಿಗೆ ಮಾಡಿರುವ ಅವಮಾನವೆಂದು ತಾವು ಬಿಂಬಿಸಲಿದ್ದೇವೆಂದು ಹಿರಿಯ ಬಿಎಸ್ಪಿ ನಾಯಕರೊಬ್ಬರು ಹೇಳಿದ್ದಾರೆ.
ಭಾರತೀಯ ಪುರಾಣಗಳನ್ನು ಬರೆದ ಮನುವಾದಿ (ದಲಿತ ವಿರೋಧಿ) ವಿದ್ವಾಂಸರು ಮಹಿಷಾಸುರನ ತಪ್ಪುಗಳನ್ನು ದಲಿತರು ಹಾಗೂ ಬುಡಕಟ್ಟು ಜನರಿಗೆ ಅಂಟಿಸಿದ್ದಾರೆ. ಮಾನವ ಸಂಪನ್ಮೂಲ ಸಚಿವೆ ದಲಿತರನ್ನು ಮಹಿಳೆಯರಿಗೆ ಗೌರವ ನೀಡದ ಸಮುದಾಯವೆಂದು ಬಿಂಬಿಸಲು ಯತ್ನಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಚರ್ಚೆಯೊಂದರಲ್ಲಿ ಸ್ಮತಿ, ಜೆಎನ್‌ಯುನಲ್ಲಿ ಮಹಿಷಾಸುರ ಹುತಾತ್ಮತಾ ದಿನವನ್ನು ಆಚರಿಸುತ್ತಿರುವುದನ್ನು ಉಲ್ಲೇಖಿಸಿದ್ದರು. ಭಾರತೀಯ ಪುರಾಣಗಳ ಪ್ರಕಾರ, ರಾಕ್ಷಸರ ರಾಜನಾಗಿದ್ದ ಆತನನ್ನು ದುರ್ಗಾ ದೇವಿ ಕೊಂದಿದ್ದಳು. ದೇಶದಲ್ಲಿ ಹಲವು ಬುಡಕಟ್ಟು ಗುಂಪುಗಳು ಮಹಿಷಾಸುರನನ್ನು ಪೂಜಿಸುತ್ತಿವೆ.
 ಸಂಸತ್ತಿನಲ್ಲಿ ಶುಕ್ರವಾರ ಈ ವಿಷಯದ ಕುರಿತು ಸ್ಮತಿಯವರೊಂದಿಗೆ ಮಾಯಾವತಿ ವಾಗ್ವಾದ ನಡೆಸಿದ್ದರು. ಸಚಿವೆ, ಬಿಎಸ್ಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ದಲಿತರನ್ನು ಅವಮಾನಿಸಿದ್ದಾರೆಂದು ಅವರು ಆರೋಪಿಸಿದ್ದರು.
ಪಕ್ಷದ ಸ್ಥಾಪಕ ಕಾನ್ಶಿರಾಂರ ಜನ್ಮ ದಿನವಾದ ಮಾ.15ರಂದು ಬಿಎಸ್ಪಿ ಈ ವಿಷಯದಲ್ಲಿ ಚಳವಳಿಯೊಂದಕ್ಕೆ ಚಾಲನೆ ನೀಡುವ ನಿರೀಕ್ಷೆಯಿದೆ.
ಬಿಎಸ್ಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ದಲಿತರ ಪರಿಹಾಸ್ಯದ ಆರೋಪವನ್ನು ಬಿಂಬಿಸುವ ಅಭಿಯಾನವೊಂದನ್ನು ವಾಟ್ಸ್ ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಆರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.
 
ಮಹಿಷಾಸುರನ ಕುರಿತು ಕಾರ್ಯಕ್ರಮಗಳನ್ನು ದಲಿತರ ಪ್ರಾಬಲ್ಯದ ಗ್ರಾಮಗಳಲ್ಲಿ ಹಾಗೂ ಕಾರ್ಯಕರ್ತರ ಶಿಬಿರಗಳಲ್ಲಿ ನಡೆಸಲಾಗುವುದು. ದಲಿತ ಆದರ್ಶ ವ್ಯಕ್ತಿಗಳ ಕೊಡುಗೆಗಳನ್ನು ಪಕ್ಷವು ಬಿಂಬಿಸಲಿದೆಯೆಂದು ಬಿಎಸ್ಪಿ ನಾಯಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News