ಕ್ಯಾಂಪಸ್‌ಗಳಲ್ಲಿ ಸಂವಾದ ನಡೆಯಲಿ, ದಬ್ಬಾಳಿಕೆ ನಿಲ್ಲಲಿ

Update: 2016-02-27 18:33 GMT

1857ರಿಂದ 1947ರ ವರೆಗಿನ 90 ವರ್ಷಗಳ ಸುದೀರ್ಘ ಸ್ವಾತಂತ್ರ್ಯ ಹೋರಾಟದ ಮೂಲಕ ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದುಮಾತ್ರವಲ್ಲ ಅದಕ್ಕೂ ಮೊದಲಿನ ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಯಾವ ಮೇಲು ವರ್ಗಗಳಿಂದ ಈ ದೇಶವನ್ನು ರಾಜಕೀಯವಾಗಿ, ಭಾವನಾತ್ಮಕವಾಗಿ ಒಂದು ಮಾಡಲು ಆಗಿರಲಿಲ್ಲವೋ ಆ ಕೆಲಸವನ್ನೂ ಭಾರತದ ರಾಷ್ಟ್ರೀಯ ಚಳವಳಿ ಮಾಡಿತ್ತು.

ಈ ಮಹಾನ್ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಈ ಚಳವಳಿಯ ಧಾರೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು ಭಾರತ ಕಮ್ಯುನಿಷ್ಟ್ ಪಕ್ಷ ಹಾಗೂ ತೀವ್ರ ಕ್ರಾಂತಿಕಾರಿಗಳ ನೇತೃತ್ವದ ಸಾವಿರಾರು ಹೋರಾಟಗಳು. ಯಾವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಧಾರೆಗಳು ಈ ನೆಲದಲ್ಲಿ ಒಂದು ಐಕ್ಯ ರಾಷ್ಟ್ರವನ್ನು ರಾಷ್ಟ್ರಪ್ರೇಮವನ್ನು ನೀಡಿದ್ದವೊ ಅವುಗಳಿಗೇ ಇಂದು ‘ದೇಶದ್ರೋಹಿ’ ಪಟ್ಟ ನೀಡಿ ಕಟಕಟೆಯಲ್ಲಿ ನಿಲ್ಲಿಸಲಾಗಿದೆ.

ಅಂದಹಾಗೆ ಅದೇ ಸುದೀರ್ಘ 90 ವರ್ಷಗಳ ಹೋರಾಟದಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿದಿದ್ದ ಹಿಂದೂ ಮಹಾಸಭಾ, ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳು (ಆರೆಸ್ಸೆಸ್) ಸ್ವಾತಂತ್ರ್ಯ ಹೋರಾಟವನ್ನು ‘ಕ್ಷುಲ್ಲಕ’ ಎಂದು ಪರಿಗಣಿಸಿದ್ದು ಮಾತ್ರವಲ್ಲ ಬ್ರಿಟಿಷರೊಂದಿಗೆ ಶಾಮೀಲಾಗಿ ಭಾರತೀಯರನ್ನು ದಮನ ಮಾಡಿದ್ದಕ್ಕೆ ದಾಖಲೆಗಳಿವೆ. ಅಂದರೆ ಈ ದೇಶವನ್ನು ಕಟ್ಟಿದ ಒಂದು ಚಳವಳಿಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದು ಇಂದು ಸಂಘಪರಿವಾರದ ಹೆಸರಿನಲ್ಲಿ ಕರೆದುಕೊಳ್ಳುವ ಆ ಸಂಘಟನೆಗಳು. ಮೇಲೆ ಹೇಳಿದ ಶಕ್ತಿಗಳನ್ನು ಇಂದು ಕಟಕಟೆಯಲ್ಲಿ ನಿಲ್ಲಿಸಿ ತಾವು ಹೇಳುವುದೇ ‘ದೇಶಭಕ್ತಿ’ ಎಂದು ಬಿಂಬಿಸುತ್ತಿರುವುದೂ ಇದೇ ಸಂಘಪರಿವಾರ. ಇದೆಂತಹ ವಿಪರ್ಯಾಸ ಎನಿಸುವುದಿಲ್ಲವೇ?

ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಸ್ವತಂತ್ರಗೊಳ್ಳಲಿದ್ದ ಭಾರತದ ರಾಜಕೀಯ ಸ್ವರೂಪ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಅಗತ್ಯವಾಗಿ ಬೇಕಿದ್ದ ಅಡಿಪಾಯವನ್ನು ಸಿದ್ಧಪಡಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್. ಈ ದೇಶ ಸ್ವತಂತ್ರಗೊಂಡರೂ ಇಲ್ಲಿನ ಸಾಮಾಜಿಕ ಸಂರಚನೆ ಬದಲಾಗದೇ, ಇಲ್ಲಿನ ಪ್ರಜೆಗೆ ವೌಲ್ಯ ಸಿಗಲಾರದು. ಅಂತಹ ವೌಲ್ಯ ವ್ಯಕ್ತಿಗೆ ಪ್ರಾಪ್ತಿಯಾಗದೇ, ಪ್ರತಿ ವ್ಯಕ್ತಿ ಬಲಗೊಳ್ಳದೇ ದೇಶ ನಿಜವಾದ ಅರ್ಥದಲ್ಲಿ ಬಲಿಷ್ಠಗೊಳ್ಳದು ಎಂಬ ಖಚಿತ ತಿಳುವಳಿಕೆ ಅವರದಾಗಿತ್ತು.ಜಾತಿಗಳಾಗಿ ಛಿದ್ರವಾಗಿರುವ ಈ ಸಮಾಜ ನಿಜವಾದ ಅರ್ಥದಲ್ಲಿ ರಾಷ್ಟ್ರವಾಗುವುದು ಇಲ್ಲಿ ಜಾತೀಯತೆ ಅಳಿದಾಗ ಮಾತ್ರ ಎಂಬುದು ಬಾಬಾಸಾಹೇಬರ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿ ಅವರು ಇಲ್ಲಿ ಕಟ್ಟಲಾಗುತ್ತಿದ್ದ ದೇಶಪ್ರೇಮ ಮತ್ತು ರಾಷ್ಟ್ರೀಯವಾದಗಳ ಬಗ್ಗೆ ಗುಮಾನಿ, ತಕರಾರು ಹೊಂದಿದ್ದರು.

ವಾಸ್ತವದಲ್ಲಿ ಇಂದು ದೇಶದಲ್ಲಿ ಬೌದ್ಧಿಕ ಚಿಂತನೆಗಳನ್ನು ಹರಿತಗೊಳಿಸುವ ವಿಶ್ವವಿದ್ಯಾನಿಲಯಗಳಲ್ಲಿ ದೇಶವನ್ನು ಒಂದು ಸಮಾಜವಾಗಿ ಮೇಲಿನ ಭಿನ್ನ ಚಿಂತನೆಗಳ ಹಿನ್ನೆಲೆಯಲ್ಲಿ ಅರಿಯುವ ಪ್ರಯತ್ನಗಳು ಸಾಗಿವೆ. ಇವುಗಳಲ್ಲಿ ಸಾಕಷ್ಟು ಅಭಿಪ್ರಾಯ, ಭಿನ್ನಾಭಿಪ್ರಾಯಗಳಿರುವುದರಿಂದ ವಿಶ್ವವಿದ್ಯಾನಿಲಯಗಳು ಸಹಜವಾಗಿ ಭಿನ್ನ ಚಿಂತನೆಗಳ ವೈಚಾರಿಕ ಮಂಥನದ ಕೇಂದ್ರಗಳಾಗಿವೆ.ವಿಶ್ವವಿದ್ಯಾನಿಲಯಗಳು ಹೀಗೇ ಇದ್ದಾಗಲೇ ಪ್ರಜಾತಂತ್ರ ಬಲಗೊಳ್ಳಲು ಅಲ್ಲಿನ ವಿದ್ಯಾರ್ಥಿಗಳು ಮತ್ತು ಬೌದ್ಧಿಕ ವಲಯಗಳು ಕೊಡುಗೆ ನೀಡಲು ಸಾಧ್ಯ.

ಈ ಕಾರಣದಿಂದ ಪ್ರತಿ ವಿಶ್ವವಿದ್ಯಾನಿಲಯ ತನಗೊಂದು ಡೆಮಾಕ್ರಟಿಕ್ ಅವಕಾಶವನ್ನು ಖಾತ್ರಿಪಡಿಸಿಕೊಂಡಿರಲೇಬೇಕು. ಆದರೆ ಎಫ್ಟಿಐಐಗೆ ಗಜೇಂದ್ರ ಚೌಹಾಣ್ ನೇಮಕದಿಂದ ಹಿಡಿದು ರೋಹಿತ್ ವೇಮುಲಾ ಆತ್ಮಹತ್ಯೆಯ ಪ್ರಕರಣದ ತದನಂತರ ಈಗ ನಡೆಯುತ್ತಿರುವ ಜೆಎನ್‌ಯು ‘ದೇಶದ್ರೋಹ’ದ ಪ್ರಕರಣಗಳನ್ನು ಗಮನಿಸಿಕೊಂಡು ಬಂದರೆ, ಈ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತಿದೆ.

ಮೇಲೆ ಉಲ್ಲೇಖಿಸಿದ ರಾಷ್ಟ್ರೀಯ ಚಳವಳಿಗೆ ಕೈಕೊಟ್ಟು ರಾಷ್ಟ್ರವನ್ನು ಕಲ್ಪಿತ ಧರ್ಮವೊಂದರ ಆಧಾರದಲ್ಲಿ ಕಟ್ಟಲು ಹೊರಟಿರುವ ಬಲಪಂಥೀಯ ಶಕ್ತಿಗಳು ವಿಶ್ವವಿದ್ಯಾನಿಲಯಗಳನ್ನು ತಮ್ಮ ಕೇಂದ್ರಗಳಾಗಿ ಮಾಡಿಕೊಳ್ಳಲು ಹವಣಿಸಿವೆ. ಆದರೆ ಸಹಜವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಈ ದೇಶವನ್ನು ಕಟ್ಟಿರುವ ಚಿಂತನೆಗಳು ಪ್ರಬಲವಾಗಿರುವುದರಿಂದ, ಮೊದಲು ಆ ಚಿಂತನೆಗಳನ್ನು ಮತ್ತು ಅವುಗಳ ವಾಹಕರಾದ ವಿದ್ಯಾರ್ಥಿ- ಪ್ರಾಧ್ಯಾಪಕ ಸಂಘಟನೆಗಳನ್ನು ತುರ್ತಾಗಿ ರಾಕ್ಷಸೀಕರಿಸುವ ಅಗತ್ಯ ಬಲಪಂಥೀಯರಿಗೆ ಬಂದಿದೆ.

ಹೀಗಾಗಿಯೇ ಮುಖ್ಯ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ದೇಶದ್ರೋಹದ ಮಾತುಗಳಿರುವ ಕಸಿಮಾಡಿದ ವೀಡಿಯೋಗಳನ್ನು, ಫೊಟೋಶಾಪ್ ಚಿತ್ರಗಳನ್ನು ದೇಶದ ಜನರ ಮುಂದೆ ತೋರಿಸಿ ‘ನೋಡಿ ಇವರು ದೇಶದ್ರೋಹಿಗಳು, ಭಯೋತ್ಪಾದಕರ ಬೆಂಬಲಿಗರು’ ಮುಂತಾಗಿ ಚೀರಾಡಿಕೊಂಡು ಹೇಳಿ ಅಮಾನುಷ ಹಲ್ಲೆಗಳನ್ನೂ ನಡೆಸಲಾಗುತ್ತಿದೆ. ಸತ್ಯ ಹೇಳಬಾರದೆಂದು ಪತ್ರಕರ್ತರನ್ನೂ ದಾಳಿಗಳಿಗೆ ಗುರಿಪಡಿಸಲಾಗಿದೆ.

ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವ ಪಿಡಿಪಿಯೂ ಸೇರಿದಂತೆ ಕಾಶ್ಮೀರಿಗಳು ಭಾರತದ ಪ್ರಭುತ್ವದ ಬಗ್ಗೆ ತೋರುವ ಅಸಹನೆ, ಅಫ್ಝಲ್ ಗುರು ಬಗ್ಗೆ ತೋರುವ ಅಭಿಮಾನ, ಈಶಾನ್ಯ ಭಾರತದಲ್ಲಿ ನಡೆಯುವ ಭಾರತ ವಿರೋಧಿ ಕೃತ್ಯಗಳು, ರಾಷ್ಟ್ರೀಯತೆ-ಒಕ್ಕೂಟಗಳ ಸಂಬಂಧಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಜೆಎನ್‌ಯು ಮಾತ್ರವಲ್ಲ ದೇಶದ ಪ್ರತಿಯೊಂದು ಕಾಲೇಜುಗಳಲ್ಲಿ ಚರ್ಚೆ ನಡೆಸಬೇಕು.

ಅಲ್ಲಿ ಎಬಿವಿಪಿಯೂ ಇರಲಿ, ಎಸ್‌ಎಫ್‌ಐ, ಐಸಾ, ಎಐಎಸ್‌ಎಫ್, ಡಿಎಸ್ಯೂ, ಎನ್‌ಎಸ್‌ಯುಐ, ಆಸಾ, ಹೀಗೆ ಎಲ್ಲ ರಾಜಕೀಯ ಧಾರೆಗಳ ವಿದ್ಯಾರ್ಥಿ ಸಂಘಟನೆಗಳೂ ಭಾಗವಹಿಸಲಿ. ಇದು ಸಮಸ್ಯೆಯಲ್ಲ. ಆದರೆ ಸಮಸ್ಯೆಯಿರುವುದು ಇಲ್ಲಿ ಅಧಿಕಾರದಲ್ಲಿರುವವರು ನಡೆಸುತ್ತಿರುವವರ ದಬ್ಬಾಳಿಕೆಯಲ್ಲಿ. ನೇರವಾಗಿ ಕೇಂದ್ರ ಸಚಿವರು ಮಾಡುತ್ತಿರುವ ಮಧ್ಯಪ್ರವೇಶ ಎಲ್ಲವನ್ನೂ ಹದಗೆಡಿಸುತ್ತಿದೆ. ಇದು ನಿಲ್ಲಬೇಕು ಅಷ್ಟೆ.

Writer - ಹರ್ಷಕುಮಾರ್ ಕುಗ್ವೆ

contributor

Editor - ಹರ್ಷಕುಮಾರ್ ಕುಗ್ವೆ

contributor

Similar News