ಎರಡು ತಿಂಗಳಿಗೊಮ್ಮೆ ಬ್ಲಾಂಕೆಟ್ ತೊಳೆಯುವ ರೈಲ್ವೇ!

Update: 2016-02-28 05:09 GMT

ಭಾರತೀಯ ರೈಲ್ವೇಯಲ್ಲಿ ನೀಡುವ ಬ್ಲಾಂಕೆಟುಗಳು ವಾಸನೆ ಹೊಡೆಯುವುದು ಏಕೆ ಎಂದು ಯಾವತ್ತಾದರೂ ಸಂಶಯ ಬಂದದ್ದಿದೆಯೆ? ಅದಕ್ಕೆ ಕಾರಣ ಅವುಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತಿದೆ.


ಕೇಂದ್ರ ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹಾ ರಾಜ್ಯಸಭೆಗೆ ತಿಳಿಸಿರುವ ಪ್ರಕಾರ, ರೈಲ್ವೇಯಲ್ಲಿ ಒದಗಿಸಲಾಗುವ ಬೆಡ್ ಶೀಟುಗಳು, ಬೆಡ್ ರೋಲ್ ಮತ್ತು ದಿಂಬು ಕವರುಗಳನ್ನು ಪ್ರತೀದಿನ ತೊಳೆದರೂ ಕಂಬಳಿಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ.
 
ರಾಜ್ಯಸಭೆಯಲ್ಲಿ ಭಾರತೀಯ ರೈಲ್ವೇಯಲ್ಲಿ ನೀಡಲಾಗುವ ಬಟ್ಟೆಗಳು ಮತ್ತು ನಾರಿನ ಕಂಬಳಿಗಳ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ವಿವಿಧ ಸದಸ್ಯರು ಮುಂದಿಟ್ಟಿರುವ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಇದಕ್ಕೆ ಬದಲಾಗಿ ಹಿಂದೆ ಪ್ರಯಾಣಿಕರು ತಮ್ಮದೇ ಕಂಬಳಿಗಳು ಮತ್ತು ದಿಂಬುಗಳನ್ನು ತರುತ್ತಿದ್ದ ವ್ಯವಸ್ಥೆಯೇ ಉತ್ತಮವಾಗಿದೆ ಎಂದು ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅಭಿಪ್ರಾಯಪಟ್ಟರು. ಅವರ ಅಭಿಪ್ರಾಯಕ್ಕೆ ಪ್ರಶ್ನೆ ಕೇಳಿದ ಕಾಂಗ್ರೆಸ್ ಸಂಸದರು ಬೆಂಬಲಿಸಿದರು. ಸಿನ್ಹಾ ಇದನ್ನು ಉತ್ತಮ ಸಲಹೆ ಎಂದು ಹೇಳಿದ್ದಲ್ಲದೆ, ಪ್ರಯಾಣಿಕರು ಹಿಂದಿನಂತೆ ತಮ್ಮದೇ ಕಂಬಳಿ ತಂದಲ್ಲಿ ರೈಲ್ವೇಗೆ ಸಮಸ್ಯೆಯಿಲ್ಲ ಎಂದರು. ರೈಲ್ವೇ ಬಳಿ 41 ಲಾಂಡ್ರಿಗಳಿವೆ ಮತ್ತು ಇದಕ್ಕೆ ಎರಡು ವರ್ಷಗಳಲ್ಲಿ 25 ಹೆಚ್ಚುವರಿ ಸೇರಿಸುವ ಯೋಜನೆಯಿದೆ. ಆ ಮೂಲಕ ರೈಲ್ವೇ ಕಂಬಳಿಗಳನ್ನು ಬಳಸುವ ಶೇ 85ರಷ್ಟು ಪ್ರಯಾಣಿಕರಿಗೆ ನೆರವಾಗುವ ಉದ್ದೇಶವಿದೆ ಎಂದು ಅವರು ಹೇಳಿದರು. ಲಾಂಡ್ರಿಗಳಿಲ್ಲದ ಕಡೆ ಈಗ ಕಂಬಳಿ ತೊಳೆಯುವ ಕೆಲಸವನ್ನು ಹೊರಗಿನವರಿಂದ ಮಾಡಿಸಿಕೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News