ಭಾರತದಲ್ಲಿ 10 ಕೋಟಿ ಮಂದಿ ಧೂಮಪಾನಿಗಳು

Update: 2016-02-28 05:16 GMT

ಹೊಸದಿಲ್ಲಿ: ಭಾರತದಲ್ಲಿ ಹಿಂದೆಂದಿಗಿಂತಲೂ ಧೂಮಪಾನಿಗಳು ಹೆಚ್ಚಿದ್ದು, 1998ರಲ್ಲಿ 79 ದಶಲಕ್ಷ ಇದ್ದ ಧೂಮಪಾನಿಗಳ ಸಂಖ್ಯೆ 2015ರಲ್ಲಿ 108 ದಶಲಕ್ಷಕ್ಕೆ ಏರಿದೆ ಎಂದು ಬಿಎಂಜೆ ಗ್ಲೋಬಲ್ ಹೆಲ್ತ್ ನಿಯತಕಾಲಿಕ ಹೇಳಿದೆ.


ಆದರೆ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಭಾರತದಲ್ಲಿ 11 ದಶಲಕ್ಷ ಮಹಿಳೆಯರು ಧೂಮಪಾನ ಮಾಡುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.


ಚೀನಾದಲ್ಲಿ 300 ದಶಲಕ್ಷ ವಯಸ್ಕ ಧೂಮಪಾನಿಗಳಿದ್ದು, ಇಲ್ಲಿ ಮಾತ್ರ ಭಾರತಕ್ಕಿಂತ ಹೆಚ್ಚು ಧೂಮಪಾನಿಗಳಿದ್ದಾರೆ. ಭಾರತದಲ್ಲಿ ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರು ಧೂಮಪಾನ ಅಥವಾ ತಂಬಾಕು ಜಗಿಯುತ್ತಾರೆ ಎಂದು ವರದಿ ವಿವರಿಸಿದೆ.


ತಂಬಾಕು ನಿಯಂತ್ರಣ ಕ್ರಮಗಳು, ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಸೇರಿದಂತೆ ಯಾವ ಕ್ರಮಗಳೂ ಹೆಚ್ಚು ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ. ಆದರೆ 15ರಿಂದ 69 ವರ್ಷದವರೆಗಿನ ಧೂಮಪಾನಿಗಳ ಸಂಖ್ಯೆ ಶೇಕಡ 27ರಿಂದ ಶೇಕಡ 24ಕ್ಕೆ ಇಳಿದಿದೆ. ಪ್ರತಿ ವರ್ಷ 17 ಲಕ್ಷ ಮಂದಿ ಧೂಮಪಾನಿಗಳು ಹೆಚ್ಚುತ್ತಿದ್ದಾರೆ. ಅಧಿಕ ಆದಾಯ ಗುಂಪಿನವರು ಈ ವ್ಯಸನಕ್ಕೆ ತುತ್ತಾಗುವ ಪ್ರಕರಣ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಡಾ.ಪ್ರಕಾಶ್ ಸಿ.ಗುಪ್ತಾ ಅವರೂ ಅಧ್ಯಯನ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News