ಕುವೈಟ್ ನಲ್ಲಿ ಪೊಲೀಸನಿಗೆ ಢಿಕ್ಕಿ ಹೊಡೆದು ಸಾಯಿಸಿದ ಆರೋಪಿ ಭಯೋತ್ಪಾದಕ: ತನಿಖೆಯಿಂದ ಬಯಲು!
ಕುವೈಟ್ ಸಿಟಿ: ರಾಷ್ಟ್ರೀಯ ದಿನಾಚರಣೆ ವೇಳೆ ಭದ್ರತಾ ಅಧಿಕಾರಿಗಳ ಮೇಲೆ ವಾಹನ ಢಿಕ್ಕಿ ಹೊಡೆದು ಪೊಲೀಸರೊಬ್ಬರು ಮೃತರಾಗಲು ಕಾರಣವಾದ ಘಟನೆ ಭಯೋತ್ಪಾದನಾ ಕೃತ್ಯವೆಂದು ತನಿಖೆ ವೇಳೆ ತಿಳಿದು ಬಂದಿದೆ. ಹಿರಿಯ ಭದ್ರತಾ ಅಧಿಕಾರಿಗಳನ್ನು ಉದ್ಧರಿಸಿ ಅಲ್ಕಬಸ್ ಪತ್ರಿಕೆ ಈ ಸುದ್ದಿಯನ್ನು ವರದಿ ಮಾಡಿದೆ.
ತನಿಖೆ ವೇಳೆ ಆರೋಪಿ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ. ದೇಶದ ಆಡಳಿತ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಚಿಂತನೆಯನ್ನು ಆರೋಪಿ ಅಬ್ದುಲ್ ಅಝೀರ್ ವಲೀದ್ ಶಾಹಿನ್ ಅಲ್‌ಶಮ್ಲಾನ್ ಹೊಂದಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಈ ಕೃತ್ಯವೆಸಗಲು ಆರೋಪಿ ಮೊದಲೇ ಯೋಜನೆ ರೂಪಿಸಿದ್ದ. ಆರೋಪಿಯ ತಂದೆ ಈ ಮೊದಲು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದರು.ಆದರೆ ಅಂತಹ ಲಕ್ಷಣಗಳು ಗೋಚರಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಪೊಲೀಸರಿಗೆ ವಾಹನ ಢಿಕ್ಕಿ ಹೊಡೆದು ಕೊಲ್ಲುವುದಕ್ಕಾಗಿ ಮಾಡಿದ ಕ್ರಮಗಳ ಕುರಿತು ಹಾಗೂ ಆಯ್ದುಕೊಂಡಿದ್ದ ಸ್ಥಳಗಳ ಕುರಿತು ಆತ ವಿಚಾರಣೆ ವೇಳೆ ತಿಳಿಸಿದ್ದಾನೆ.
ಅದೇ ವೇಳೆ ಈತನಿಂದ ಹತರಾದ ಪೊಲೀಸ್ ಅಧಿಕಾರಿ ತುರ್ಕಿ ಮುಹಮ್ಮದ್ ಅಲ್‌ಇನ್ಸಿಯವರ ಮೃತದೇಹ ಸಂಸ್ಕಾರ ಕಾರ್ಯಕ್ರಮ ಶುಕ್ರವಾರ ಭಾರೀ ಜನಸಂದಣಿಯ ಸಮ್ಮುಖದಲ್ಲಿ ನಡೆದಿದೆ. ಗೃಹ ಸಚಿವ ಶೇಕ್ ಮುಹಮ್ಮದ್ ಅಲ್‌ಖಾಲಿದ್ ಅಸ್ಸಬಾಹ್, ಗೃಹಸಚಿವಾಲಯ ಸಹಾಯಕ ಕಾರ್ಯದರ್ಶಿ ಲೆಪ್ಟಿನೆಂಟ್ ಜನರಲ್ ಸುಲೈಮಾನ್ ಅಲ್ ಫಹದ್ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಕಲ ಅಧಿಕೃತ ಗೌರವಗಳೊಂದಿಗೆ ಮೃತದೇಹದ ದಫನ ಕಾರ್ಯ ನಡೆದಿದೆ.
ದೇಶದ ಭದ್ರತೆಗಾಗಿ ಕರ್ತವ್ಯ ನಿರ್ವಹಿಸಿ ಪ್ರಾಣ ಕಳಕೊಂಡ ಧೀರಯೋಧನನ್ನು ದೇಶ ಕೃತಜ್ಚಾಪೂರ್ವಕವಾಗಿ ಸ್ಮರಿಸುತ್ತಿದೆ ಎಂದು ಶೇಕ್ ಮುಹಮ್ಮದ್ ಅಲ್ ಖಾಲಿದ್ ಅಸ್ಸಬಾಹ್ ಈ ಸಂದರ್ಭದಲ್ಲಿ ಹೇಳಿದ್ದಾರೆ.