ರಿಯಾದ್: ರಕ್ಷಣಾ ಸಾಮಗ್ರಿಗಳ ಪ್ರದರ್ಶನಕ್ಕೆ ತೆರೆ
ರಿಯಾದ್, ಫೆ.28: ಸೌದಿ ಕಂಪೆನಿಗಳಿಂದ ನಿರ್ಮಾಣಗೊಂಡ ರಕ್ಷಣಾ ಸಾಮಗ್ರಿಗಳ ಬೃಹತ್ ಪ್ರದರ್ಶನ ಸಮಾಪನಗೊಂಡಿದೆ.
40,000 ಕಂಪೆನಿಗಳಿಗೆ ಹೂಡಿಕೆ ಮಾಡಲು ಅವಕಾಶವಿರುವ ಮಿಡ್ಲೀಸ್ಟ್‌ನ ಅತಿದೊಡ್ಡ ಪ್ರದರ್ಶನವಿದಾಗಿದೆ. ಶನಿವಾರ ಪ್ರದರ್ಶನಕ್ಕೆತೆರೆ ಎಳೆಯಲಾಗಿದೆ. ವಿವಿಧ ಕಂಪೆನಿಗಳು ಸ್ವಯಂ ನಿರ್ಮಿಸಿದ ಸೈನಿಕ ಉಪಕರಣಗಳ ಬಿಡಿಭಾಗಗಳ ನಿರ್ಮಾಣ ಕ್ಷೇತ್ರದಲ್ಲಿ ಸ್ವಯಂ ಸಾಮರ್ಥ್ಯವನ್ನು ಸಾಧಿಸುವ ಗುರಿಯಾಗಿಟ್ಟು ಈ ಮೇಳವನ್ನು ಏರ್ಪಡಿಸಲಾಗಿತ್ತು.
ರಕ್ಷಣಾ ಕ್ಷೇತ್ರದ ಶೇ. 60ರಷ್ಟು ಬಿಡಿಭಾಗಗಳನ್ನು ಸೌದಿಯಲ್ಲಿಯೇ ನಿರ್ಮಿಸಲಾಗಿದೆ. ಸ್ಥಳೀಯ ಕಂಪೆನಿಗಳ ಸ್ಟಾಲ್‌ಗಳಲ್ಲದೆ ರಕ್ಷಣಾ ಕ್ಷೇತ್ರದ ಬೃಹತ್ ಕಂಪೆನಿಯಾದ ಬೋಯಿಂಗ್, ಬಿ,ಎ,ಇ.ಸಿಸ್ಟಂಸ್, ಜನರಲ್ ಡೈನಮಿಕ್ಸ್, ಲಾಕ್ಹೀಡ್ ಮಾರ್ಟಿನ್ ಮುಂತಾದ ಕಂಪೆನಿಗಳ ಉತ್ಪನ್ನಗಳನ್ನೂ ಪ್ರದರ್ಶಿಸಲಾಗಿತ್ತು. ಏಳು ದಿವಸಗಳಲ್ಲಿ ನಡೆದ ಪ್ರದರ್ಶನ ಭಾರೀ ಹೂಡಿಕೆ ಸಾಧ್ಯತೆಗಳನ್ನು ತೆರೆದುಕೊಟ್ಟು ಕೊನೆಗೊಂಡಿದೆ ಎಂದು ನ್ಯಾಶನಲ್ ಗಾರ್ಡ್ ಬ್ರಿಗೆಡಿಯರ್ ಜನರಲ್ ಅತಿಯ್ಯ ಬಿನ್ ಸಾಲಿಹ್ ಹೇಳಿದ್ದಾರೆ.
ಅತ್ಯಾಧುನಿಕ ಯುದ್ಧ ಉಪಕರಣಗಳಾದ ಟಾರ್ಪಿಡೊ, ಟೋರ್ನಾಡೊ, ಹಾಕ್, ಎಫ್-16, ಅಪಾಚೆಹೆಲಿಕಾಪ್ಟರ್ ಮುಂತಾದುವುಗಳ ಮಾದರಿಗಳು ಅಂತಾರಾಷ್ಟ್ರೀಯ ಕಂಪೆನಿಗಳ ಸ್ಟಾಲ್‌ಗಳಲ್ಲಿ ಪ್ರದರ್ಶಿಸಲಾಗಿತ್ತು. ಫೋರ್ಡ್, ಟೊಯೊಟಾಗಳ ಅತ್ಯಾಧುನಿಕ ವಾಹನಗಳು ವಸ್ತುಪ್ರದರ್ಶನದಲ್ಲಿದ್ದವು.