×
Ad

ರಾಜ್ಯಕ್ಕೆ ದಕ್ಕದ ಪ್ರಭು ರೈಲು...

Update: 2016-02-28 23:22 IST

 ಕನ್ನಡಿಗರಾದ ಸದಾನಂದ ಗೌಡರನ್ನು ರೈಲ್ವೆಮಂತ್ರಿ ಪದವಿಯಿಂದ ಮೋದಿಯವರು ಅವಮಾನಕರ ರೀತಿಯಲ್ಲಿ ತೆಗೆದು ಹಾಕಿ ಸುರೇಶ್ ಪ್ರಭುವನ್ನು ರೈಲ್ವೆ ಮಂತ್ರಿ ಮಾಡಿದಾಗ ‘‘ಕರ್ನಾಟಕದ ಮಗ ಹೋಗಿ ಕರ್ನಾಟಕದ ಅಳಿಯ ರೈಲ್ವೆ ಮಂತ್ರಿ ಆದರು, ಹಾಗಾಗಿ ಕನ್ನಡಿಗರಿಗೆ ಅನ್ಯಾಯವಾಗಲಿಕ್ಕಿಲ್ಲ’’ ಎಂದು ಕನ್ನಡಿಗರು ಸಮಾಧಾನಪಟ್ಟಿದ್ದರು. ಆದರೆ ಸುರೇಶ್ ಪ್ರಭುಈಗ ಎರಡನೇ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿದ್ದಾರೆ, ಆದರೆ ಈ ಎರಡೂ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಅಷ್ಟೇ ಅಲ್ಲ ಹಿಂದಿನ ಉತ್ತರ ಭಾರತೀಯ ರೈಲ್ವೆ ಮಂತ್ರಿಗಳು ಕೊಟ್ಟಿದ್ದಷ್ಟೂ ಈ ಕರ್ನಾಟಕದ ಅಳಿಯ ಕನ್ನಡಿಗರಿಗೆ ಕೊಟ್ಟಿಲ್ಲ. ಆದರೂ ಕರ್ನಾಟಕದ ಬಿಜೆಪಿ ಸಂಸದರು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವುದು ತಮಾಷೆಯಾಗಿದೆ.
 
 
 ಮೂಲತಃ ಶಿವಸೇನೆಯಿಂದ ಬಂದಿರುವ ಪಕ್ಕಾ ಮರಾಠಿಗನಾಗಿರುವ ಈ ಸುರೇಶ್ ಪ್ರಭುವನ್ನು ಕರ್ನಾಟಕದ ಅಳಿಯ ಎಂದು ಹೇಳಿದ್ದು ಯಾವ ಬೆಪ್ಪನೋ ಗೊತ್ತಿಲ್ಲ. ಈ ಅಳಿಯ ಮನೆ ತೊಳೆಯ ಆಗಿ ತನ್ನ ಅತ್ತೆ ಮನೆ ಕರ್ನಾಟಕಕ್ಕೆ ಚೂರು ಪಾರು ಕೊಟ್ಟು ಕೈತೊಳೆದುಕೊಂಡಿದ್ದಾರೆ. ತನ್ನದ್ದೇ ಅತ್ತೆ ಮನೆ ಇರುವ ಕಾರವಾರವನ್ನು ಸಂಪರ್ಕಿಸುವ ಅತಿ ಮುಖ್ಯ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಈತ ಕೊಟ್ಟಿದ್ದು ಜುಜುಬಿ 18 ಕೋಟಿ ರೂ. ಹಾಗಾದರೆ ಈ 160 ಕಿ.ಮೀ ಮಾರ್ಗ ಪೂರ್ತಿಯಾಗಲು ಇನ್ನೂ ಐವತ್ತು ವರ್ಷಗಳಾದರೂ ಬೇಕು. ಅಷ್ಟರಲ್ಲಿಯೇ ಯಾವುದಾದರೂ ಪರಿಸರ-ವ್ಯಾಧಿ ಮತ್ತೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿ ಅಡ್ಡಗಾಲು ಖಂಡಿತಾ ಹಾಕುತ್ತಾನೆ. ಈ ಮಾರ್ಗ ಪೂರ್ತಿಯಾಗುವಾಗ ನಾನು ಬದುಕಿರುವುದಿಲ್ಲ ಬಿಡಿ. ಯಡಿಯೂರಪ್ಪನವರ ಅತ್ಯಂತ ಮಹತ್ವಾಕಾಂಕ್ಷೆಯ ಶಿವಮೊಗ್ಗ-ತಾಳಗುಪ್ಪ-ಹೊನ್ನಾವರ ಮಾರ್ಗಕ್ಕೆ ಈಗ ಕೊಟ್ಟಿದ್ದು ಪುಡಿಗಾಸು. ಉತ್ತರ ಕನ್ನಡ ಜಿಲ್ಲೆ ಸುರೇಶ್ ಪ್ರಭುವಿನ ಅತ್ತೆ ಮನೆ ಆದರೂ ಈ ಉತ್ತರ ಕನ್ನಡ ಜಿಲ್ಲೆಗೆ ಪ್ರಭುವಿನಿಂದ ಮಂತ್ರದೊಟ್ಟಿಗೆ ಕೇವಲ ಉಗುಳು ಮಾತ್ರ ಸಿಕ್ಕಿದೆ. ಹೋದ ವರ್ಷಕ್ಕಿಂತ ಈ ಸಾರಿ ಕರ್ನಾಟಕ್ಕೆ ರೂ.250 ಕೋಟಿ ಹೆಚ್ಚು ಸಿಕ್ಕಿದೆ ಎಂದು ವಾದಿಸುವ ಬಿಜೆಪಿಯವರು ಗಮನಿಸಬೇಕೆಂದರೆ ಹಣದುಬ್ಬರ ಲೆಕ್ಕ ಹಾಕಿದರೆ ಈ 250 ಕೋಟಿ ರೂಪಾಯಿ ಹೆಚ್ಚಿನ ಅನುದಾನ ಎಂದು ಪರಿಗಣಿಸಲಾಗದು. ಕೆಲವೇ ತಿಂಗಳ ಹಿಂದೆ ಈ ಪ್ರಭು ಉಡುಪಿಗೆ ಬಂದಿದ್ದಾಗ ತಾನು ಕರಾವಳಿಯ ಹಿಂದೂ ಕ್ಷೇತ್ರಗಳ ಪ್ರವಾಸಿ ಕಾರಿಡಾರ್ ಆಗಿ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಹೊರನಾಡು ಇವನ್ನೂ ಒಂದೇ ರೈಲು-ಮಾರ್ಗದಲ್ಲಿ ನೇರವಾಗಿ ಒಳನಾಡಿಗೆ ಸಂಪರ್ಕಿಸುವ ಮೂಡಿಗೆರೆ-ಚಿಕ್ಕಮಗಳೂರು ಮೂಲಕ ಸುಲಭ ಮಾರ್ಗದ ಸಾಧ್ಯತೆ ಬಗ್ಗೆ ನಿಶ್ಚಿತವಾಗಿ ಪರಿಶೀಲಿಸುವುದಾಗಿ ಪೇಜಾವರರಿಗೆ ಕೊಟ್ಟ ಭರವಸೆ ಏನಾಯಿತು? ಎಲ್ಲಿ ಹೋಯಿತು ಬಿಜೆಪಿ ಮೇಲಿನ ಪೇಜಾವರ ಸ್ವಾಮಿಗಳ ಪ್ರಭಾವ?
 
                 ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಒದಗಿಸಿರುವುದು ಕೇವಲ ಕರ್ನಾಟಕ ಮಾತ್ರ. ಉಳಿದ ನಾಲ್ಕು ರಾಜ್ಯಗಳಾದ ತೆಲಂಗಾಣ ಆಂಧ್ರ, ತಮಿಳುನಾಡು, ಕೇರಳ, ಇಲ್ಲೆಲ್ಲಾ ಇನ್ನು ನೂರು ವರ್ಷಗಳಾದರೂ ಬಿಜೆಪಿಗೆ ನೆಲೆ ಸಿಗಲಾರದು. ಕಡೇ ಪಕ್ಷ ಕನ್ನಡಿಗರ ಈ ಋಣ ತೀರಿಸಲಾದರೂ ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕಕ್ಕೆ ನಿಜವಾಗಿ ಅಗತ್ಯವಿರುವ ಯೋಜನೆಗಳನ್ನು ಕೊಡುವುದಿಲ್ಲವೆಂದಾದರೆ ಕನ್ನಡಿಗರೇಕೆ ಇಂತಹ ಕೃತಘ್ನ ಬಿಜೆಪಿ ಬಗ್ಗೆ ಒಲವು ಹೊಂದಿರಬೇಕು? -

Writer - ಆರ್‌../... .ಬಿ ಶೇಣವ

contributor

Editor - ಆರ್‌../... .ಬಿ ಶೇಣವ

contributor

Similar News