×
Ad

ನಾಪತ್ತೆಯಾಗಿರುವ 64,943 ಮಕ್ಕಳು ಇನ್ನೂ ಅಜ್ಞಾತ

Update: 2016-02-28 23:47 IST

ಹೊಸದಿಲ್ಲಿ,ಫೆ.28: ನಾಪತ್ತೆಯಾಗುವ ಮಕ್ಕಳ ಶೋಧಕ್ಕಾಗಿ ಸರಕಾರವು ಪ್ರತಿ ವರ್ಷ ಸುಮಾರು 2.5 ಕೋ.ರೂ.ಗಳನ್ನು ವ್ಯಯಿಸುತ್ತದೆಯಾದರೂ ಕಳೆದ ನಾಲ್ಕು ವರ್ಷಗಳಲ್ಲಿ ನಾಪತ್ತೆಯಾಗಿರುವ 60,000ಕ್ಕೂ ಅಧಿಕ ಮಕ್ಕಳನ್ನು ಪತ್ತೆ ಹಚ್ಚಲು ಈವರೆಗೂ ಸಾಧ್ಯವಾಗಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆ 2012,ಜನವರಿಯಿಂದ 2016,ಫೆಬ್ರವರಿಯ ನಡುವೆ ಒಟ್ಟು 1,94,213 ಮಕ್ಕಳು ನಾಪತ್ತೆಯಾಗಿದ್ದು,ಈ ಪೈಕಿ 1,29,270 ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಉಳಿದ 64,943 ಮಕ್ಕಳನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.
ಮಕ್ಕಳ ನಾಪತ್ತೆಗೆ ಅಪಹರಣ,ಮಾನವ ಕಳ್ಳ ಸಾಗಣೆ,ಅನಧಿಕೃತ ದತ್ತು, ಸ್ವಇಚ್ಛೆಯಿಂದ ಮನೆ ತೊರೆಯುವಿಕೆ ಮತ್ತು ನೈಸರ್ಗಿಕ ವಿಕೋಪಗಳು ಕಾರಣಗಳಾಗಿವೆ ಎಂದು ಹೇಳಿದ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು, ಅತ್ಯಂತ ಹೆಚ್ಚಿನ ಸಂಖ್ಯೆಯ(44,095) ಮಕ್ಕಳು ಪಶ್ಚಿಮ ಬಂಗಾಲದಿಂದ ನಾಪತ್ತೆಯಾಗಿದ್ದು, ಈ ಪೈಕಿ 36,055 ಮಕ್ಕಳನ್ನು ಬಳಿಕ ಪತ್ತೆ ಹಚ್ಚಲಾಗಿದೆ. ಎರಡನೆ ಸ್ಥಾನದಲ್ಲಿರುವ ಉತ್ತರ ಪ್ರದೇಶದಿಂದ ನಾಪತ್ತೆಯಾಗಿದ್ದ 26,008 ಮಕ್ಕಳ ಪೈಕಿ 14,646 ಮಕ್ಕಳನ್ನಷ್ಟೇ ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದರು.
ನಾಪತ್ತೆಯಾಗಿರುವ ಮತ್ತು ಕಳೆದು ಹೋಗಿ ಸಿಕ್ಕಿರುವ ಮಕ್ಕಳ ಜಾಡು ಹಿಡಿಯಲು ‘‘ಟ್ರಾಕ್ ಚೈಲ್ಡ್’’ ಮತ್ತು ‘‘ಖೋಯಾ-ಪಾಯಾ’’ ಎಂಬ ಎರಡು ಜಾಲತಾಣಗಳನ್ನು ಸಚಿವಾಲಯವು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News