ಮುಂಬೈ: ಕುಟುಂಬದ 14 ಮಂದಿಯನ್ನು ಕೊಂದು ಆತ್ಮಹತ್ಯೆಗೈದ ಪಾತಕಿ
ಮುಂಬೈ, ಫೆ.28: ಮಹಾರಾಷ್ಟ್ರದ ಠಾಣೆಯ ಕಸರ್ವಾಡವ್ಲಿ ಪ್ರದೇಶದಲ್ಲಿ 35ರ ಹರೆಯದ ವ್ಯಕ್ತಿಯೊಬ್ಬ 7 ಮಕ್ಕಳು ಸಹಿತ ತನ್ನ ಕುಟುಂಬದ 14 ಮಂದಿಯನ್ನು ಇರಿದು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಹನ್ಸಿಲ್ ವಾರೇಕರ್ ಎಂದು ಗುರುತಿಸಲಾಗಿರುವ ಆರೋಪಿ, ತನ್ನ ಹೆತ್ತವರು, ಹೆಂಡತಿ ಹಾಗೂ ಸೋದರಿಯರು ಸಹಿತ ಕುಟುಂಬ ಸದಸ್ಯರಿಗೆ ನಿದ್ದೆಯ ಔಷಧ ನೀಡಿ, ದೊಡ್ಡ ಚೂರಿಯೊಂದರಿಂದ ಅವರ ಗಂಟಲುಗಳನ್ನು ಸೀಳಿದನೆಂದು ಠಾಣೆ ಪೊಲೀಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಗಜಾನ ಕಬ್ದುಲೆ ಪತ್ರಕರ್ತರಿಗೆ ವಿವರಿಸಿದರು.
ರವಿವಾರ ನಸುಕಿನಲ್ಲಿ ಪೊಲೀಸರು ಮೃತ ದೇಹಗಳನ್ನು ಪತ್ತೆ ಮಾಡಿದ್ದಾರೆ.
ಈ ಹತ್ಯಾಕಾಂಡದಿಂದ ಪಾರಾದ ಮಹಿಳೆಯೊಬ್ಬಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ಘಟನೆಗೆ ಕಾರಣ ತಿಳಿದುಬಂದಿಲ್ಲವಾದರೂ, ಆಸ್ತಿ ವಿವಾದ ಈ ಕೊಲೆಗಳಿಗೆ ಕಾರಣವೆಂದು ವರದಿಗಳು ಹೇಳಿವೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಠಾಣೆಯ ನಾಗರಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ತನಿಖೆ ಆರಂಭವಾಗಿದೆಯೆಂದು ಕಬ್ದುಲೆ ತಿಳಿಸಿದರು.