ಸೋನಿ ಸೋರಿ ಮೇಲಿನ ದಾಳಿ ನಾಟಕೀಯ ಸಂಚು
ರಾಯಪುರ ಫೆ.28: ಬುಡಕಟ್ಟು ಜನಾಂಗದ ಪರ ಹೋರಾಟ ಮಾಡುತ್ತಿರುವ ಸೋನಿ ಸೋರಿ ಅವರ ಮೇಲಿನ ದಾಳಿ ಪೂರ್ವನಿಯೋಜಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೇಟಿ ಹಿನ್ನೆಲೆಯಲ್ಲಿ, ವಿವಾದದ ಅಲೆ ಸೃಷ್ಟಿಸುವ ಹುನ್ನಾರ ಎಂದು ಫೇಸ್‌ಬುಕ್ ಪೋಸ್ಟ್ ಮಾಡುವ ಮೂಲಕ ಬಸ್ತರ್ ಜಿಲ್ಲಾ ನ್ಯಾಯಾಧೀಶ ಅಮಿತ್ ಕಟಾರಿಯಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕಟಾರಿಯಾ ಸಮರ್ಥಿಸಿಕೊಂಡರು. ಆದರೆ ವಾಸ್ತವವಾಗಿ ಈ ಬರಹವನ್ನು ಬಸ್ತರ್‌ನಲ್ಲಿ ಪಿಎಂಆರ್‌ಡಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಐಟಿ ಕಾನ್ಪುರದ ಹಳೆವಿದ್ಯಾರ್ಥಿ ಅರೀಬ್ ಅಹ್ಮದ್ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಅಂಥ ರಹಸ್ಯ ತನಿಖಾ ದಾಖಲೆ ಅವರ ಕೈಗೆ ಹೇಗೆ ಸೇರಿತು ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.
ಫೇಸ್‌ಬುಕ್ ಕಾಮೆಂಟನ್ನು ಕಟಾರಿಯಾ ರಾತ್ರಿ 10.12ಕ್ಕೆ ಪೋಸ್ಟ್ ಮಾಡಿದ್ದು, ಶನಿವಾರ ಸಂಜೆವರೆಗೆ 600 ಲೈಕ್ ಹಾಗೂ 34 ಕಾಮೆಂಟ್‌ಗಳು ಬಂದಿವೆ. ಬಸ್ತರ್‌ನಲ್ಲಿ ಹೊರಗಿನ ವ್ಯಕ್ತಿಗಳು ಪ್ರಚಾರ ಆಂದೋಲನ ಕೈಗೊಂಡಿದ್ದಾರೆ. ಇದು ಯುದ್ಧೂಮಿಗೆ ಕಡಿಮೆಯೇನೂ ಇಲ್ಲ. ಈ ದಾಳಿ ಅಚ್ಚರಿಯ ವಿಷಯ. ಏಕೆಂದರೆ, ಘಟನೆ ಬಗೆಗಿನ ವಿಚಾರಣೆ, ಬೆಳಕಿನ ವೇಗಕ್ಕಿಂತಲೂ ವೇಗವಾಗಿ ಮಾಧ್ಯಮಗಳಿಗೆ ಹರಿದಿವೆ. ಇದು ಪೂರ್ವಯೋಜಿತವಾಗಿದ್ದು, ಪ್ರಧಾನಿ ರಾಜ್ಯಕ್ಕೆ ಬೇಟಿ ನೀಡುತ್ತಿರುವ ಹಿಂದಿನ ದಿನ ನಡೆದ ದಾಳಿಯನ್ನು ನಂಬುವುದು ಹಾಗೂ ಅರಗಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.
ಮಾವೋವಾದಿ ಪ್ರಚಾರಾಂದೋಲನವನ್ನು ಡಿಕೋಡಿಂಗ್ ಮಾಡಿದಾಗ, ದೊಡ್ಡ ಅಚ್ಚರಿ ಸೋನಿ ಸೋರಿ ಅವರಿಂದ ಬಂದಿದೆ. ಏಕೆಂದರೆ, ರಾಷ್ಟ್ರೀಯ ಮಾಧ್ಯಮ ಈ ಆಸಿಡ್ ದಾಳಿಯ ಒಂದೇ ಚಿತ್ರಗಳನ್ನು ಕೆಲವೇ ನಿಮಿಷಗಳಲ್ಲಿ ಹೇಗೆ ಪಡೆಯಲು ಸಾಧ್ಯವಾಯಿತು ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಪೆಬ್ರವರಿ 21ರಂದು ಮೋದಿ ರಾಯಪುರಕ್ಕೆ ಬೇಟಿ ನೀಡುವ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆಯುವ ಉದ್ದೇಶದಿಂದ ಮತ್ತು ಬಸ್ತರ್ ಪ್ರದೇಶ ಕೇಂದ್ರೀಕರಿಸುವ ಉದ್ದೇಶದ ಹುನ್ನಾರ ಇದು ಎಂದು ಹೇಳಿದ್ದಾರೆ.