ಪೊಲೀಸ್ ಆಗಬಯಸಿದ್ದ ದಲಿತೆಯ ಗ್ಯಾಂಗ್‌ರೇಪ್
ಕರೀಂನಗರ, ಫೆ.28: ಪೊಲೀಸ್ ಅಧಿಕಾರಿಣಿಯಾಗಬಯಸಿದ್ದ 22ರ ಹರೆಯದ ಯುವತಿಯೊಬ್ಬಳ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಇನ್ನೊಬ್ಬ ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ಹೇಯ ಘಟನೆ ತೆಲಂಗಾಣದ ಕರೀಂ ನಗರ ಜಿಲ್ಲೆಯಲ್ಲಿ ನಡೆದಿದೆಯೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆರೋಪಿಗಳೆಂದು ಗುರುತಿಸಲಾಗಿರುವ ಜಿ. ಶ್ರೀನಿವಾಸ್ ಹಾಗೂ ಅಂಜಯ್ಯ ಎಂಬವರು, ಸಂತ್ರಸ್ತೆಯ ಬ್ಯಾಚ್‌ಮೇಟ್‌ಗಳಾಗಿದ್ದು, ಪೊಲೀಸ್ ದಳಕ್ಕೆ ಸೇರಲು ಆಕೆಯೊಂದಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅವರು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯನ್ನು ಅತ್ಯಾಚಾರ ಮಾಡಿ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಅವರು ವೀಡಿಯೊ ದೃಶ್ಯವನ್ನು ಬಹಿರಂಗಪಡಿಸುವ ಬೆದರಿಕೆಯೊಡ್ಡುವ ಮೂಲಕ ಆಕೆಯನ್ನು ಬ್ಲಾಕ್‌ಮೇಲ್ ಮಾಡಿ, ಅವಳ ಮೇಲೆ ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದರು.
ಒಬ್ಬ ಆರೋಪಿ, ಯುವತಿಯಂತೆಯೇ, ಪೊಲೀಸ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಅದೇ ಕೋಚಿಂಗ್ ಕ್ಲಾಸ್‌ಗೆ ಸೇರಿದ್ದನು.
ಫೆ.10ರಂದು ವೀಣವಂಕ ಗ್ರಾಮದ ಸರಹದ್ದಿನಲ್ಲಿ ಈ ಘಟನೆ ನಡೆದಿದೆ. ದೂರುದಾರೆ, ಆಕೆಯ ಗೆಳತಿ ಹಾಗೂ ಮೂವರು ಆರೋಪಿಗಳು ಸಿನೆಮಾ ನೋಡಿ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಮೂವರು ಆರೋಪಿಗಳು ಮಹಿಳೆಯನ್ನು ಬೆಟ್ಟವೊಂದಕ್ಕೆ ಒಯ್ದರು. ಅಪಾಯದ ಸೂಚನೆಯನ್ನರಿತ ಆಕೆಯ ಸ್ನೇಹಿತೆ ಓಡಿ ತಪ್ಪಿಸಿಕೊಂಡಳು. ಇಬ್ಬರು, ಯುವತಿಯರ ಮೇಲೆ ಅತ್ಯಾಚಾರ ನಡೆಸಿದರೆ, ಮೂರನೆಯಾತ ಅದನ್ನು ತನ್ನ ಸೆಲ್‌ಫೋನ್‌ನಲ್ಲಿ ಚಿತ್ರೀಕರಿಸಿದನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.