ಉನ್ನತ ಶಿಕ್ಷಣ ಆರ್ಥಿಕ ನೆರವು ಏಜೆನ್ಸಿ ಸ್ಥಾಪನೆಗೆ ನಿರ್ಧಾರ
ಹೊಸದಿಲ್ಲಿ,ಫೆ.29: 1,000 ಕೋ.ರೂ.ಗಳ ಮೂಲ ಬಂಡವಾಳದೊಂದಿಗೆ ಉನ್ನತ ಶಿಕ್ಷಣ ಆರ್ಥಿಕ ನೆರವು ಏಜೆನ್ಸಿ(ಎಚ್‌ಇಎಫ್‌ಎ)ಯನ್ನು ಸ್ಥಾಪಿಸುವುದಾಗಿ ಸರಕಾರವು ಮುಂಗಡಪತ್ರದಲ್ಲಿ ಪ್ರಕಟಿಸಿದೆ. ಏಜೆನ್ಸಿಯು ಮಾರುಕಟ್ಟೆಯಿಂದ ಹಣಕಾಸು ಕ್ರೋಡೀಕರಿಸಲಿದೆ ಮತ್ತು ಐಐಟಿಗಳಂತಹ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಸೃಷ್ಟಿಗೆ ಶ್ರಮಿಸಲಿದೆ.
10 ಸರಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಯ ಬೋಧನಾ ಮತ್ತು ಸಂಶೋಧನಾ ಕೇಂದ್ರಗಳಾಗಿ ಹೊರಹೊಮ್ಮುವಂತೆ ಮಾಡಲು ಅವುಗಳಿಗಾಗಿ ನಿಯಂತ್ರಣ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಬಗ್ಗೆಯೂ ವಿತ್ತಸಚಿವ ಅರುಣ್ ಜೇಟ್ಲಿ ತನ್ನ ಮುಂಗಡಪತ್ರ ಭಾಷಣದಲ್ಲಿ ಉಲ್ಲೇಖಿಸಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿರಿಸಲು ಪ್ರಸ್ತುತ ಶೇರು ಮತ್ತು ಭದ್ರತಾ ಪತ್ರಗಳಿಗಾಗಿ ಇರುವ ಸೆಕ್ಯೂರಿಟಿ ಡಿಪಾಸಿಟರಿಯ ಮಾದರಿಯಲ್ಲಿ ಡಿಜಿಟಲ್ ಡಿಪಾಸಿಟರಿಯ ಸ್ಥಾಪನೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ 62 ನವೋದಯ ಶಾಲೆಗಳ ಆರಂಭವನ್ನೂ ವಿತ್ತಸಚಿವರು ಪ್ರಕಟಿಸಿದರು.