ಅಣುಶಕ್ತಿ ವಲಯಕ್ಕೆ 3 ಸಾವಿರ ಕೋಟಿ ರೂ.
ಹೊಸದಿಲ್ಲಿ,ಫೆ.29: ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಅಣುಶಕ್ತಿ ಯೋಜನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು 2016-17ನೆ ಸಾಲಿನ ಬಜೆಟ್‌ನಲ್ಲಿ ಅಣುಶಕ್ತಿ ವಲಯಕ್ಕೆ 3 ಸಾವಿರ ಕೋಟಿ ರೂ. ಅನುದಾನ ಘೋಷಿಸಿದೆ. ಅಣುಶಕ್ತಿ ಉತ್ಪಾದನಾ ವಲಯದಲ್ಲಿ ಹೂಡಿಕೆಯನ್ನು ವೃದ್ಧಿಸಲು ಮುಂದಿನ 15ರಿಂದ 20 ವರ್ಷಗಳೊಳಗೆ ಸಮಗ್ರ ಯೋಜನೆಯೊಂದನ್ನು ಕೇಂದ್ರ ಸರಕಾರವು ರೂಪಿಸುತ್ತಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ಬಜೆಟ್ ಮಂಡನೆಯ ವೇಳೆ ತಿಳಿಸಿದರು. ಅಣುಶಕ್ತಿ ಉತ್ಪಾದನೆಯಲ್ಲಿ ಸ್ಥಿರತೆಯನ್ನು ಕಾಪಾಡಲು ವಿವಿಧ ಇಂಧನಮೂಲಗಳನ್ನು ಸಂಪಾದಿಸುವ ಅಗತ್ಯವಿದೆಯೆಂದು ಅವರು ತಿಳಿಸಿದರು.
..............
ಪ್ರೈಮ್ ಮಿನಿಸ್ಟರ್ ಫಸಲ್ ಬಿಮಾ ಯೋಜನಾ
ಸರಕಾರ ‘ಪ್ರೈಮ್ ಮಿನಿಸ್ಟರ್ ಫಸಲ್ ಬಿಮಾ ಯೋಜನಾ’ ಎಂಬ ಅದ್ಭುತ ಬೆಳೆ ವಿಮಾ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಜೇಟ್ಲಿ ತಿಳಿಸಿದರು. ಯೋಜನೆಯನ್ನು 2016-17ರಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು 5,500 ಕೋಟಿ ರೂ. ಒದಗಿಸಲಾಗಿದೆ ಎಂದರು.
ಕೃಷಿ ಉತ್ಪನ್ನ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನೀರಾವರಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದ ಸಚಿವರು, ‘‘ಪ್ರಧಾನ್ ಮಂತ್ರಿ ಕೃಷಿ ಸಂಚಯ್ ಯೋಜನೆಯನ್ನು ಬಲಪಡಿಸಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ’’ ಎಂದರು.
ಈ ಯೋಜನೆಯನ್ವಯ 28.5 ಲಕ್ಷ ಹೆಕ್ಟೇರ್ ಜಮೀನನ್ನು ನೀರಾವರಿ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವರು ನುಡಿದರು.
ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶಕ್ಕಾಗಿಯೇ ದೀರ್ಘಾವಧಿಯ ನಿಧಿಯೊಂದನ್ನು ಸ್ಥಾಪಿಸಲಾಗುವುದು ಹಾಗೂ 20,000 ಕೋಟಿ ರೂ.ಯನ್ನು ಅದರಲ್ಲಿ ಆರಂಭಿಕ ಠೇವಣಿಯಾಗಿ ಇಡಲಾಗುವುದು ಎಂದು ಜೇಟ್ಲಿ ತಿಳಿಸಿದರು.
‘‘ವೇಗದ ನೀರಾವರಿ ಸೌಲಭ್ಯ ಕಾರ್ಯಕ್ರಮ (ಎಐಬಿಪಿ)ದ ಅಡಿಯಲ್ಲಿ 89 ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು’’ ಎಂದರು. ಇದರಿಂದ 80.6 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸಲು ಸಹಾಯವಾಗುತ್ತದೆ.
ಈ 89 ಯೋಜನೆಗಳಿಗೆ ಮುಂದಿನ ವರ್ಷ 17,000 ಕೋಟಿ ರೂ. ಅಗತ್ಯವಿದೆ ಹಾಗೂ ಮುಂದಿನ ಐದು ವರ್ಷಗಳಲ್ಲಿ 86,500 ಕೋಟಿ ರೂ. ಬೇಕಾಗುತ್ತದೆ.
ಈ ಪೈಕಿ ಕನಿಷ್ಠ 23 ಯೋಜನೆಗಳನ್ನು ಸರಕಾರ 2017 ಮಾರ್ಚ್ 31ರ ಮುಂಚೆ ಪೂರ್ಣಗೊಳಿಸಲಿದೆ ಎಂದು ಜೇಟ್ಲಿ ನುಡಿದರು.
.....................
ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಸದೃಢಗೊಳಿಸಲು ಯೋಜನೆ ಹೊಸದಿಲ್ಲಿ,ಫೆ.29: ಮುಂದಿನ ಹಣಕಾಸು ವರ್ಷದಲ್ಲಿ 25,000 ಕೋ.ರೂ.ಗಳ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಸದೃಢಗೊಳಿಸಲು ಮಾರ್ಗಸೂಚಿಯೊಂದನ್ನು ಸರಕಾರವು ಅನಾವರಣಗೊಳಿಸಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿಯವರು ಸೋಮವಾರ ತನ್ನ ಮುಂಗಡಪತ್ರ ಭಾಷಣದಲ್ಲಿ ತಿಳಿಸಿದರು.
ಅಲ್ಲದೆ ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕಿನಲ್ಲಿಯ ತನ್ನ ಪಾಲು ಬಂಡವಾಳವನ್ನು ಶೇ.50ಕ್ಕೆ ತಗ್ಗಿಸುವ ಬಗ್ಗೆಯೂ ಸರಕಾರವು ಪರಿಶೀಲಿಸಬಹುದು ಎಂದು ಅವರು ತಿಳಿಸಿದರು.
ನಮ್ಮ ಸಾರ್ವಜನಿಕ ಕ್ಷೇತ್ರದಲ್ಲಿಯ ಬ್ಯಾಂಕುಗಳು ಬಲಗೊಳ್ಳಬೇಕಾಗಿವೆ ಮತ್ತು ಸ್ಪರ್ಧಾತ್ಮಕವಾಗಿರಬೇಕಾಗಿವೆ. ಬ್ಯಾಂಕ್ ಬೋರ್ಡ್ ಬ್ಯೂರೋ 2016-17ರಲ್ಲಿ ಕಾರ್ಯಾರಂಭಗೊಳ್ಳಲಿದ್ದು,ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಸದೃಢಗೊಳಿಸಲು ಮಾರ್ಗಸೂಚಿಯೊಂದನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು. ಐಡಿಬಿಐ ಬ್ಯಾಂಕಿನ ರೂಪಾಂತರದ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದೂ ಸಚಿವರು ತಿಳಿಸಿದರು.
ಸಾರ್ವಜನಿಕ ಕ್ಷೇತ್ರದಲ್ಲಿಯ ಬ್ಯಾಂಕುಗಳಲ್ಲಿನ ಒತ್ತಡದಲ್ಲಿರುವ ಆಸ್ತಿಗಳ ಕುರಿತಂತೆ ಅವರು, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಸಂಬಂಧ ಹಲವಾರು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಬ್ಯಾಂಕುಗಳ ಸಾಲ ನೀಡಿಕೆ ವ್ಯವಹಾರ ಮತ್ತು ವೈಯಕ್ತಿಕ ವಿಷಯಗಳಲ್ಲಿ ನಾವು ಹಸ್ತಕ್ಷೇಪವನ್ನು ಮಾಡುವುದಿಲ್ಲ ಎಂದರು.
ಈ ಬ್ಯಾಂಕುಗಳಿಗೆ ಹೆಚ್ಚುವರಿ ಬಂಡವಾಳದ ಅಗತ್ಯವಿದ್ದರೆ ಅದಕ್ಕಾಗಿ ಸಂಪನ್ಮೂಲಗಳನ್ನು ಸರಕಾರವು ಕಂಡುಕೊಳ್ಳಲಿದೆ ಎಂದ ಸಚಿವರು, ನಾವು ಬ್ಯಾಂಕುಗಳಿಗೆ ದೃಢವಾದ ಬೆಂಬಲವನ್ನು ನೀಡಲಿದ್ದೇವೆ ಎಂದರು.
........................
ದೀನದಯಾಳ್, ಗುರುಗೋವಿಂದ್ ಸಿಂಗ್
ಜನ್ಮ ವರ್ಷಾಚರಣೆಗೆ 100 ಕೋಟಿ ರೂ.
ಹೊಸದಿಲ್ಲಿ,ಫೆ.29: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ಹಾಗೂ ಗುರುಗೋವಿಂದ್ ಸಿಂಗ್ ಅವರ 350ನೆ ಜನ್ಮ ವರ್ಷಾಚರಣೆಗಾಗಿ ಒಟ್ಟು 100 ಕೋಟಿ ರೂ.ಅನುದಾನವನ್ನು ಕೇಂದ್ರ ಸರಕಾರವು ಸೋಮವಾರ ಘೋಷಿಸಿದೆ.
ಕೇಂದ್ರ ವಿತ್ತ ಸಚಿವ ಅರುಣ್‌ಜೇಟ್ಲಿ ಲೋಕಸಭೆಯಲ್ಲಿ 2016-17ನೆ ಸಾಲಿನ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ 1916ರಲ್ಲಿ ಹಾಗೂ ಸಿಖ್ ಧರ್ಮದ 10ನೆ ಗುರುವಾದ ಗುರುಗೋವಿಂದ್‌ಸಿಂಗ್ 1666ರಲ್ಲಿ ಜನಿಸಿದ್ದರು. ಮುಂದಿನ ವರ್ಷ ಭಾರತವು ತನ್ನ 70ನೆ ಸ್ವಾತಂತ್ರೋತ್ಸವವನ್ನು ಆಚರಿಸಲಿದೆಯೆಂದು ಜೇಟ್ಲಿ ಈ ಸಂದರ್ಭದಲ್ಲಿ ತಿಳಿಸಿದರು. 1540ರ ಮೇನಲ್ಲಿ ಜನಿಸಿದ ಮೇವಾಡದ ದೊರೆ ಮಹಾರಾಣಾ ಪ್ರತಾಪ್‌ನ 475ನೆ ಜಯಂತಿಯನ್ನು ಆಚರಿಸುವ ಯೋಜನೆಯನ್ನು ಕೂಡಾ ಸರಕಾರ ಹಮ್ಮಿಕೊಂಡಿದೆಯೆಂದರು.
ಕೇಂದ್ರ ಸರಕಾರವು ಲಾಲಾಲಜಪತ್ ರಾಯ್ ಅವರ 150ನೆ ಜನ್ಮವರ್ಷಾಚರಣೆಯನ್ನು ಆಚರಿಸಿದ್ದು, ಅವರ ಸ್ಮರಣಾರ್ಥ 150 ರೂ.ಮೊತ್ತದ ನಾಣ್ಯವನ್ನು ಬಿಡುಗಡೆಗೊಳಿಸಿತ್ತು ಹಾಗೂ ಈ ಮಹಾನ್ ಸ್ವಾತಂತ್ರ ಯೋಧನ ನೆನಪಿಗಾಗಿ 10 ರೂ. ನಾಣ್ಯವನ್ನೂ ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ತಾತ್ಯಾ ಟೋಪೆಯ 200ನೆ ಜನ್ಮದಿನಾಚರಣೆಯನ್ನೂ ಸರಕಾರ ಆಚರಿಸಲಿದೆಯೆಂದು ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರವು ರಾಷ್ಟ್ರೀಯ ಪ್ರಾಮುಖ್ಯತೆವಿರುವ ವ್ಯಕ್ತಿಗಳ ಜನ್ಮಶತಮಾನೋತ್ಸವವನ್ನು ಆಚರಿಸಲಿದೆಯೆಂದು ಈ ಹಿಂದೆ ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ ಅವರು ತಿಳಿಸಿದ್ದರು.