‘ಗಾಂಧಿ ನುಡಿ ’ವಿವಾದದಲ್ಲಿ ಟ್ರಂಪ್
ವಾಶಿಂಗ್ಟನ್,ಮಾ.1: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮಹಾತ್ಮಗಾಂಧಿಯ ನುಡಿಯೆಂದು ಹೇಳಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿರುವ ವಾಕ್ಯವೊಂದು, ಇದೀಗ ಅಮೆರಿಕದ ಮಾಧ್ಯಮಗಳಲ್ಲಿ ವಿವಾದವನ್ನು ಸೃಷ್ಠಿಸಿದೆ. ಮಹಾತ್ಮಾಗಾಂಧಿ, ಈ ಮಾತನ್ನು ಯಾವತ್ತಾದರೂ ಬಳಸಿದ್ದಾರೆಂಬುದಕ್ಕೆ ಯಾವುದೇ ನಿದರ್ಶನವಿಲ್ಲವೆಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
‘‘ಮೊದಲಿಗೆ ಅವರು ನಿಮ್ಮನ್ನು ನಿರ್ಲಕ್ಷಿಸುವರು. ಬಳಿಕ ಅವರು ನಿಮ್ಮನ್ನು ನೋಡಿ ನಗುವರು. ಆನಂತರ ನಿಮ್ಮ ವಿರುದ್ಧ ಹೋರಾಡುವರು. ಆಗ ನೀವು ಗೆದ್ದೇ ಗೆಲ್ಲುವಿರಿ- ಮಹಾತ್ಮ ಗಾಂಧಿ’’ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದರು. ಅಲಬಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಿರುವ ಛಾಯಾಚಿತ್ರವನ್ನು ಕೂಡಾ ಟ್ರಂಪ್ ಇದರ ಜೊತೆ ಪೋಸ್ಟ್ ಮಾಡಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಟ್ರಂಪ್ ಹೇಳಿಕೆ ಅವರ ವಿರೋಧಿಗಳಿಗೆ ಒಳ್ಳೆಯ ಅಸ್ತ್ರವನ್ನು ಒದಗಿಸಿದೆ. ‘‘ ಮಹಾತ್ಮ ಗಾಂಧಿ ಎಂದಾದರೂ ಹೀಗೆ ಹೇಳಿದ್ದಾರೆಂಬುದಕ್ಕೆ ಯಾವುದೇ ದಾಖಲೆಗಳಿಲ್ಲ’’ ಎಂದು ಅಮೆರಿಕದ ಆನ್‌ಲೈನ್ ಸುದ್ದಿ ಸಂಸ್ಥೆ ‘ ದಿ ಹಿಲ್’ ತಿಳಿಸಿದೆ. ಈ ವಾಕ್ಯವು 1918ರಲ್ಲಿ ಅಮೆರಿಕದ ಸಮಾಜವಾದಿ ನಾಯಕ ನಿಕೊಲಾಸ್ ಕ್ಲೆನ್, ತನ್ನ 1918ರಲ್ಲಿ ನಡೆದ ಕಾರ್ಮಿಕ ಒಕ್ಕೂಟದ ಸಭೆಯೊಂದರಲ್ಲಿ ಬಳಸಿದ್ದ ಪದಗಳ ಜೊತೆ ಸಾಮ್ಯತೆಯನ್ನು ಹೊಂದಿದೆಯೆಂದು ಅದು ಹೇಳಿದೆ. ಈ ಮಧ್ಯೆ ‘ಕ್ರಿಶ್ಚಿಯನ್ ಸಯನ್ಸ್ ಮಾನಿಟರ್ ’ ಎಂಬ ಸುದ್ದಿಸಂಸ್ಥೆಯು ಟ್ರಂಪ್ ಅವರ ಈ ಹೇಳಿಕೆಯನ್ನು ವಿಶ್ವದ ಟಾಪ್ 10 ಪ್ರಮಾದಭರಿತ ರಾಜಕೀಯ ಉಲ್ಲೇಖಗಳ ಪಟ್ಟಿಗೆ ಸೇರಿಸಿದೆ. ಆದಾಗ್ಯೂ ಈ ಬಗ್ಗೆ ಟ್ರಂಪ್ ಪಾಳಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
‘‘ಗಾಂಧಿ ಈ ಮಾತನ್ನು ಹೇಳಿರಲಿಲ್ಲ’’ ಎಂದು ಸ್ಕಾಟ್ ಟಿ.ಸ್ಮಿತ್ ಟ್ವಿಟರ್‌ನಲ್ಲಿ ಪ್ರಸಾರ ಮಾಡಿದ್ದಾರೆ.