ಕೆಲವೇ ದಿನಗಳಲ್ಲಿ ಪಾಕ್ ಸಿಟ್ ತಂಡ ಭಾರತಕ್ಕೆ
ವಾಶಿಂಗ್ಟನ್, ಮಾ.1: ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಪಾಕ್ ಅಧಿಕಾರಿಗಳ ತಂಡವು ಮುಂದಿನ ಕೆಲವು ದಿನಗಳೊಳಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆಯೆಂದು ಪ್ರಧಾನಿ ನವಾಝ್ ಶರೀಫ್‌ರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್ ತಿಳಿಸಿದ್ದಾರೆ . ಸ್ಥಗಿತಗೊಂಡಿರುವ ಉಭಯದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ಶೀಘ್ರದಲ್ಲೇ ಪುನಾರಂಭಗೊಳ್ಳುವ ಭರವಸೆಯನ್ನು ಕೂಡಾ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.ರವಿವಾರ ವಾಶಿಂಗ್ಟನ್‌ನಲ್ಲಿ ನಡೆದ ಅಮೆರಿಕ-ಪಾಕ್ ವ್ಯೆಹಾತ್ಮಕ ಮಾತುಕತೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘‘ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿ ಘಟನೆಯಿಂದಾಗಿ ಉಭಯದೇಶಗಳ ನಡುವಿನ ಮಾತುಕತೆ ಪ್ರಕ್ರಿಯೆಗೆ ಅಡಚಣೆಯುಂಟಾಗಿತ್ತು. ಪಠಾಣ್‌ಕೋಟ್ ಘಟನೆಯ ಬಳಿಕ ಪಾಕ್ ಕೆಲವೊಂದು ಮಹತ್ವದ ಹೆಜ್ಜೆಗಳನ್ನು ಕೈಗೊಂಡಿದೆ’’ ಎಂದು ಅಝೀಝ್ ತಿಳಿಸಿದ್ದ್ಜಾರೆ.
ಪಠಾಣ್‌ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನವು ಪ್ರಕರಣ ದಾಖಲಿಸಿಕೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ವಿಶೇಷ ತನಿಖಾ ತಂಡವೊಂದು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಭಾರತ-ಪಾಕ್ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆಯು ಪುನಾರಂಭಗೊಳ್ಳುವುದೆಂಬ ಭರವಸೆಯನ್ನು ನಾವು ಹೊಂದಿದ್ದೇವೆ’’ ಎಂದವರು ಹೇಳಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜನವರಿ 2ರಂದು ನಡೆದ ಪಠಾಣ್‌ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಾರತ ಸರಕಾರವು ನೀಡಿದ ಸುಳಿವುಗಳ ಹಿನ್ನೆಲೆಯಲ್ಲಿ ಪಾಕಿಸ್ತಾನವು ಐವರು ಸದಸ್ಯರ ತನಿಖಾ ತಂಡವನ್ನು ರಚಿಸಿದೆ. ಈ ಭಯೋತ್ಪಾದಕ ದಾಳಿಯ ಸಂಚನ್ನು ‘ಜೈಶೆ ಮುಹಮ್ಮದ್’ ಉಗ್ರಗಾಮಿ ಸಂಘಟನೆಯ ನಾಯಕ ಮಸೂದ್ ಅಝರ್ ರೂಪಿಸಿದ್ದಾನೆಂದು ಭಾರತವು ಆರೋಪಿಸಿದ ಬಳಿಕ ಇಸ್ಲಾಮಾಬಾದ್ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಮಸೂದ್ ಅಝರ್‌ನ ಹೆಸರನ್ನು ಪ್ರಸ್ತಾಪಿಸಿಲ್ಲ.