ಗುಂಪಿನ ಮೇಲೆ ಗುಂಡು ಹಾರಿಸಲು ಸೇನೆಗೆ ಆದೇಶಿಸುವಂತಿಲ್ಲ: ಸುಪ್ರೀಂ
ಹೊಸದಿಲ್ಲಿ, ಮಾ.1: ಗುಂಪಿನ ಮೇಲೆ ಗುಂಡು ಹಾರಿಸಲು ಸೇನೆಗೆ ಅನುಮತಿ ನೀಡುವಂತಿಲ್ಲವೆಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಹರ್ಯಾಣದಲ್ಲಿ ಜಾಟ್ ಮೀಸಲಾತಿ ಚಳವಳಿಯ ವೇಳೆ ದಾಂಧಲೆ ನಡೆಸುವ ಗುಂಪನ್ನು ನಿಯಂತ್ರಿಸಲು ಸೇನೆಗೆ ಮುಕ್ತ ಸ್ವಾತಂತ್ರ ನೀಡುವಂತೆ ಮಾಡಿದ್ದ ಮನವಿಯೊಂದನ್ನು ಅದು ತಳ್ಳಿ ಹಾಕಿದೆ.
‘‘ಸೇನೆಯು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತವಾಗಿದೆ. ಯಾವಾಗ, ಎಲ್ಲಿ ಅಂತಹ ಪರಿಸ್ಥಿತಿ ಸೃಷ್ಟಿಯಾಗುವುದೋ ಆಗ ಎಚ್ಚರಿಕೆ ವಹಿಸಲಾಗುವುದು.
ನೀವು ಸೇನೆಯು ಗುಂಪಿನ ಮೇಲೆ ಗುಂಡು ಹಾರಿಸಲು ಅವಕಾಶ ಬಯಸಿದ್ದೀರಿ. ನಾವು ಅಂತಹ ನಿರ್ದೇಶನ ನೀಡುವಂತಿಲ್ಲ. ಗುಂಪಿನ ಮೇಲೆ ಗುಂಡು ಹಾರಿಸಲು ನಾವು ಅವಕಾಶ ನೀಡುವಂತಿಲ್ಲ ಎಂದು ಮುಖ್ಯ ನ್ಯಾಯಾಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಾಮೂರ್ತಿಗಳಾದ ಆರ್.ಭಾನುಮತಿ ಹಾಗೂ ಯು.ಯು.ಲಲಿತ್‌ರಿದ್ದ ಪೀಠವೊಂದು ಹೇಳಿದೆ.
ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನಿನನ್ವಯವೇ ಕ್ರಮ ಕೈಗೊಳ್ಳಲಾಗುವುದೆಂದ ಪೀಠ ಮನವಿಯನ್ನು ತಳ್ಳಿ ಹಾಕಿತು.
ಅರ್ಜಿದಾರರ ವಕೀಲ ಅಜಯ್ ಜೈನ್, ಹಿಂಸಾತ್ಮಾಕ ಚಳವಳಿಯ ಸಂತ್ರಸ್ತರಿಗೆ ಪರಿಹಾರ ಬಯಸಿದ್ದರೆ, ಪೀಠ ಅದನ್ನು ಪರಿಗಣಿಸುವ ಬಗ್ಗೆ ಯೋಚಿಸಬಹುದಿತ್ತೆಂದು ಅದು ಹೇಳಿತು.
ತನ್ನ ಮನವಿಗೆ ತಿದ್ದುಪಡಿ ಮಾಡಲು ಅರ್ಜಿದಾರರು ಬಳಿಕ ಅನುಮತಿ ಕೇಳಿದರು. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಕೊನೆಗೂ ಜೈನ್, ತನ್ನ ಮನವಿಯನ್ನು ಹಿಂದೆ ಪಡೆದರು.