ಇ-ಪಾವತಿ ವ್ಯವಸ್ಥೆಯಡಿ ಇನ್ನಷ್ಟು ಕಲ್ಯಾಣ ಯೋಜನೆಗಳು:ರಾಷ್ಟ್ರಪತಿ

Update: 2016-03-01 12:15 GMT

ಹೊಸದಿಲ್ಲಿ,ಮಾ.1: ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಯು ದಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಮಂಗಳವಾರ ಇಲ್ಲಿ ಒತ್ತಿ ಹೇಳಿದ ರಾಷ್ಟ್ರಪತಿ ಪ್ರಣವ್ ಮಖರ್ಜಿ ಅವರು, ಸರಕಾರವು ಭವಿಷ್ಯದಲ್ಲಿ ಇನ್ನಷ್ಟು ಕಲ್ಯಾಣ ಯೋಜನೆಗಳನ್ನು ಇ-ಪಾವತಿ ವ್ಯವಸ್ಥೆಗೊಳಪಡಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.


ಸರಕಾರವು ಆರ್ಥಿಕವಾಗಿ ದುರ್ಬಲರು ಮತ್ತು ಶೋಷಿತ ವರ್ಗಗಳನ್ನು ತಲುಪಲು ಆದ್ಯತೆಯ ವಿಧಾನವಾಗಿ ಅತ್ಯಂತ ಹೆಚ್ಚಿನ ಮಹತ್ವವನ್ನು ಡಿಬಿಟಿ ವ್ಯವಸ್ಥೆಗೆ ನೀಡುತ್ತಿದೆ ಎಂದು ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಗಳ 40ನೆಯ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ ಮುಖರ್ಜಿ ಹೇಳಿದರು.


ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ವಿಧಾನವು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ವಿಳಂಬಗಳನ್ನು ನಿವಾರಿಸುವ ಜೊತೆಗೆ ಭ್ರಷ್ಟಾಚಾರವನ್ನು ಗಣನೀಯವಾಗಿ ತಗ್ಗಿಸುತ್ತದೆ ಎಂದರು.


ಪ್ರಸಕ್ತ ಎಲ್‌ಪಿಜಿ ಮೇಲಿನ ಸಬ್ಸಿಡಿ,ವಿದ್ಯಾರ್ಥಿ ವೇತನ ಪಾವತಿ ಇತ್ಯಾದಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ಖರೀದಿ ಶಕ್ತಿ ಹೋಲಿಕೆಗೆ ಸಂಬಂಧಿಸಿದಂತೆ ಭಾರತವು ವಿಶ್ವದಲ್ಲಿ ಮೂರನೆಯ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂದು ಒತ್ತಿ ಹೇಳಿದ ರಾಷ್ಟ್ರಪತಿಗಳು,ಅದು ಜಾಗತಿಕ ಆರ್ಥಿಕತೆಯೊಂದಿಗೆ ಬೆಸೆದುಕೊಳ್ಳುತ್ತಿರುವುದರಿಂದ ದಿನಗಳು ಕಳೆದಂತೆ ದೇಶದ ಆರ್ಥಿಕತೆಯ ಗಾತ್ರ,ಪ್ರಮಾಣ ಮತ್ತು ಸಂಕೀರ್ಣತೆಯು ಹಚ್ಚುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News