×
Ad

ಟ್ರಂಪ್ ಸಭೆಯಿಂದ ಕರಿಯ ವಿದ್ಯಾರ್ಥಿಗಳನ್ನು ಹೊರದಬ್ಬಿದರು

Update: 2016-03-02 22:41 IST

ವಾಶಿಂಗ್ಟನ್, ಮಾ. 2: ಅಮೆರಿಕದ ಜಾರ್ಜಿಯ ರಾಜ್ಯದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಸಭೆಯಿಂದ ಸುಮಾರು 30 ಕರಿಯ ವಿದ್ಯಾರ್ಥಿಗಳನ್ನು ಹೊರದಬ್ಬಿದ ಘಟನೆ ಸೋಮವಾರ ನಡೆದಿದೆ.

ಈಗಾಗಲೇ ಮುಸ್ಲಿಂ ವಿರೋಧಿ ಮತ್ತು ಮೆಕ್ಸಿಕೊ ವಿರೋಧಿ ಹೇಳಿಕೆಗಳನ್ನು ನೀಡಿರುವುದು ಸೇರಿದಂತೆ ವಿವಾದಗಳ ಸರಮಾಲೆಯನ್ನೇ ಸೃಷ್ಟಿಸಿರುವ ಟ್ರಂಪ್, ಈಗ ಹೊಸದೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಸುಮಾರು 30 ಕರಿಯ ವಿದ್ಯಾರ್ಥಿಗಳನ್ನು ಹೊರಗೆ ದಬ್ಬುವ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂಬ ಬಗ್ಗೆ ಹಲವು ವಿವರಣೆಗಳಿವೆ.

ವಲ್ಡೋಸ್ಟದಲ್ಲಿ ನಡೆದ ಟ್ರಂಪ್‌ರ ರ್ಯಾಲಿಯಲ್ಲಿ ತಾವು ವೌನವಾಗಿ ನಿಂತುಕೊಂಡಿದ್ದೆವು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

 ಈ ವಿದ್ಯಾರ್ಥಿಗಳ ಗುಂಪು ವಲ್ಡೋಸ್ಟ ಸರಕಾರಿ ವಿಶ್ವವಿದ್ಯಾನಿಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಟ್ರಂಪ್‌ರನ್ನು ಭೇಟಿಯಾಗಲು ಕಾಯುತ್ತಿದ್ದರು. ಆಗ, ಸಭೆಯಿಂದ ಹೊರಗೆ ಹೋಗುವಂತೆ ಅವರಿಗೆ ಸೂಚಿಸಲಾಯಿತು ಹಾಗೂ ಬಳಿಕ ಹೊರಗೆ ಕಳುಹಿಸಲಾಯಿತು.

‘‘ಅಭ್ಯರ್ಥಿಯ ಮನವಿ’’ಯಂತೆ ಈ ಕರಿಯ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಯಿತು ಎಂಬುದನ್ನು ಟ್ರಂಪ್‌ರ ವಕ್ತಾರೆಯೊಬ್ಬರು ನಿರಾಕರಿಸಿದ್ದಾರೆ ಎಂದು ‘ಯುಎಸ್‌ಎ ಟುಡೆ’ ವರದಿ ಮಾಡಿದೆ.

ಫೆಡರಲ್ ಏಜಂಟ್‌ಗಳು ತಮ್ಮನ್ನು ಕಟ್ಟಡದಿಂದ ಹೊರಗೆ ದಬ್ಬಿದರು ಎಂಬ ವಿದ್ಯಾರ್ಥಿಗಳ ಹೇಳಿಕೆಯನ್ನು ಗುಪ್ತಚರ ಸೇವೆಯ ವಕ್ತಾರರೊಬ್ಬರು ನಿರಾಕರಿಸಿದರು. ಪ್ರತಿಭಟನಕಾರರನ್ನು ನಿಭಾಯಿಸುವ ಹೊಣೆ ಟ್ರಂಪ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರದ್ದಾಗಿತ್ತು ಎಂದು ಅವರು ಹೇಳಿದರು.

ಆದಾಗ್ಯೂ, ‘‘ಈ ವಿದ್ಯಾರ್ಥಿಗಳನ್ನು ಪಿಇ ಕಾಂಪ್ಲೆಕ್ಸ್‌ನಿಂದ ಹೊರಗೆ ಹೋಗಲು ಹೇಳಿದ್ದು ಟ್ರಂಪ್ ಸಿಬ್ಬಂದಿ’’ ಎಂದು ವಲ್ಡೋಸ್ಟ ಪೊಲೀಸ್ ಮುಖ್ಯಸ್ಥ ಬ್ರಯಾನ್ ಚಿಲ್ಡ್ರಸ್ ಹೇಳಿದರು. ಟ್ರಂಪ್‌ರ ಸಿಬ್ಬಂದಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಹಾಗೂ ಅದು ಜನಾಂಗೀಯ ವಿಷಯವಲ್ಲ ಎಂದು ತನಗನಿಸುತ್ತದೆ ಎಂದರು.

ತಾವು ಕುಳಿತುಕೊಂಡು ವೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು, ಆದರೆ, ಟ್ರಂಪ್ ಮಾತನಾಡಲು ಆರಂಭಿಸುವ ಮೊದಲೇ ಭದ್ರತಾ ಅಧಿಕಾರಿಗಳು ತಮ್ಮನ್ನು ಹೊರದಬ್ಬಿದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಟ್ರಂಪ್ ಸಭೆ ನಡೆದ ವಿಶ್ವವಿದ್ಯಾನಿಲಯಕ್ಕೆ 1963ರವರೆಗೂ ಬಿಳಿಯರಿಗೆ ಮಾತ್ರ ಪ್ರವೇಶವಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News