×
Ad

ಕಾಲರಾದಂಥ ರೋಗಗಳನ್ನು ಹರಡುವ ಎಲ್ ನಿನೊ: ನೂತನ ಅಧ್ಯಯನ

Update: 2016-03-02 23:32 IST

ಲಂಡನ್, ಮಾ. 2: ಸಮುದ್ರದ ನೀರಿನಲ್ಲಿ ಜೀವಿಸುವ ಬ್ಯಾಕ್ಟೀರಿಯಗಳ ಮೂಲಕ ಎಲ್ ನಿನೊ ಕಾಲರಾದಂಥ ರೋಗಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಎಲ್ ನಿನೊ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಪ್ರತಿ 3ರಿಂದ 7 ವರ್ಷಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ಹವಾಮಾನ ಪರಿಸ್ಥಿತಿಯಾಗಿದೆ.
ಲ್ಯಾಟಿನ್ ಅಮೆರಿಕದಲ್ಲಿ ನೀರಿನಿಂದ ಹರಡುವ ಬ್ಯಾಕ್ಟೀರಿಯದಿಂದ ಉಂಟಾದ ರೋಗವು, ಸಮುದ್ರದ ಎಲ್ ನಿನೊ ನೀರು ಭೂಮಿಯನ್ನು ಸಂಪರ್ಕಿಸಿದಾಗಲೆಲ್ಲ ಅದರೊಂದಿಗೆ ಮುಂದಕ್ಕೆ ಚಲಿಸುತ್ತಿರುವಂತೆ ಕಂಡುಬರುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ.
ಏಶ್ಯದಲ್ಲಿ ಕಾಯಿಲೆ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳು ಮತ್ತು ದಕ್ಷಿಣ ಅಮೆರಿಕದಲ್ಲಿ ಪತ್ತೆಯಾಗಿರುವ ಸೂಕ್ಷ್ಮಾಣು ಜೀವಿಗಳ ನಡುವೆ ಸಂಬಂಧವಿದೆ ಎಂದು ಸಂಶೋಧಕರು ಹೇಳುತ್ತಾರೆ.
ಕಳೆದ 30 ವರ್ಷಗಳ ಅವಧಿಯಲ್ಲಿ ಮೂರು ಪ್ರಮುಖ ಎಲ್ ನಿನೊಗಳು ಸಂಭವಿಸಿದ್ದು, ಲ್ಯಾಟಿನ್ ಅಮೆರಿಕದಲ್ಲಿ ನೂತನ ತಳಿಯ ನೀರಿನಲ್ಲಿ ಹರಡುವ ಸೂಕ್ಷ್ಮಾಣುಜೀವಿಗಳು ಕಾಣಿಸಿಕೊಂಡಿವೆ ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನವು 'ನೇಚರ್ ಮೈಕ್ರೊಬಯಾಲಜಿ' ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
1990ರಲ್ಲಿ ಪೆರುವಿನಲ್ಲಿ ಕಾಲರಾ ಕಾಣಿಸಿಕೊಂಡಿತ್ತು. ರೋಗವು 13,000ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತು. 1997 ಮತ್ತು 2010ರಲ್ಲೂ ಹೊಸ ಮಾದರಿಯ ಕಾಲರಾ ಬ್ಯಾಕ್ಟೀರಿಯಗಳು ಸಮುದ್ರದ ಕಪ್ಪೆಚಿಪ್ಪುಗಳ ಮೂಲಕ ಹರಡಿ ರೋಗ ಕಾಣಿಸಿಕೊಂಡಿತು. ಭಾರೀ ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡರು.
ಈ ಮೂರು ಘಟನೆಗಳ ನಡುವೆ ಸಂಬಂಧವಿದೆ ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News