7 ರಾಜ್ಯಗಳಲ್ಲಿ ಟ್ರಂಪ್, ಹಿಲರಿ ಬೃಹತ್ ಮುನ್ನಡೆ
ವಾಶಿಂಗ್ಟನ್, ಮಾ. 2: ಅಮೆರಿಕದ ಅಧ್ಯಕ್ಷೀಯ ಚುನಾ ವಣೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿವಿಧ ರಾಜ್ಯಗಳಲ್ಲಿ ವಿಜಯಗಳನ್ನು ಸಂಪಾದಿಸಿದ್ದು, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳಾಗುವ ನಿಟ್ಟಿನಲ್ಲಿ ಮಂಗಳವಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಆದಾಗ್ಯೂ, ತಾವು ಹೋರಾಟವನ್ನು ಮುಂದುವರಿಸುವುದಾಗಿ ಉಭಯ ಪಕ್ಷಗಳ ಇತರ ಅಭ್ಯರ್ಥಿ ಆಕಾಂಕ್ಷಿಗಳು ಹೇಳಿದ್ದಾರೆ.
69 ವರ್ಷದ ಟ್ರಂಪ್ ಮತ್ತು 68 ವರ್ಷದ ಹಿಲರಿ ಕ್ಲಿಂಟನ್ ತಮ್ಮ ತಮ್ಮ ಪಕ್ಷಗಳ ಮಟ್ಟಗಳಲ್ಲಿ ವಿವಾದಾತೀತ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಇನ್ನು ಅವರು ತಮ್ಮ ತಮ್ಮ ಪಕ್ಷಗಳಲ್ಲಿನ ಮತಗಳನ್ನು ಒಗ್ಗೂಡಿಸಬಲ್ಲೆವು ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯವು ನವೆಂಬರ್ 8ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾದ ಒತ್ತಡದಲ್ಲಿದ್ದಾರೆ.
ಹಿಲರಿ ಕ್ಲಿಂಟನ್ ಏಳು ರಾಜ್ಯಗಳಲ್ಲಿ ವಿಜಯ ಸಂಪಾದಿಸಿದ್ದಾರೆ. ಅರ್ಕಾನ್ಸಸ್ ಮುಂತಾದ ದಕ್ಷಿಣದ ರಾಜ್ಯಗಳಲ್ಲಿ ಆಫ್ರಿಕನ್ ಅಮೆರಿಕನ್ ಮತದಾರರ ಬೆಂಬಲವನ್ನು ಹಿಲರಿ ಗಳಿಸಿಕೊಂಡಿದ್ದಾರೆ. ಅವರ ಮುನ್ನಡೆಯಲ್ಲಿ ಇದು ಮಹತ್ವದ ಪರಿಣಾಮವನ್ನು ಬೀರಿದೆ.
ಅದೇ ವೇಳೆ, ತಾವು ಸ್ಪರ್ಧೆಯಲ್ಲಿ ಮುಂದುವರಿ ಯುವುದಾಗಿ ಟ್ರಂಪ್ ಎದುರಾಳಿಗಳಾದ ಟೆಕ್ಸಾಸ್‌ನ ಸೆನೆಟರ್ ಟೆಡ್ ಕ್ರೂಝ್ ಮತ್ತು ಫ್ಲೋರಿಡದ ಸೆನೆಟರ್ ಮಾರ್ಕೊ ರೂಬಿಯೊ ಸ್ಪಷ್ಟಪಡಿಸಿದ್ದಾರೆ.
ಕ್ರೂಝ್ ಟೆಕ್ಸಾಸ್ ಮತ್ತು ನೆರೆಯ ಓಕ್ಲಹಾಮದಲ್ಲಿ ವಿಜಯಿಯಾಗಿದ್ದಾರೆ. ರೂಬಿಯೊ ಮಿನಸೋಟದಲ್ಲಿ ಜಯ ಸಂಪಾದಿಸಿದ್ದಾರೆ. ಇದು ಅವರ ಪ್ರಥಮ ಜಯವಾಗಿದೆ.
ಹಿಲರಿಯ ಎದುರಾಳಿ ಬರ್ನೀ ಸ್ಯಾಂಡರ್ಸ್ ತನ್ನ ತವರು ರಾಜ್ಯ ವರ್ಮಂಟ್, ಕೊಲ ರಾಡೊ, ಮಿನ ಸೋಟ ಮತ್ತು ಓಕ್ಲಹಾಮದಲ್ಲಿ ವಿಜಯಿಯಾಗಿದ್ದಾರೆ. ಇನ್ನಷ್ಟೇ ಮತದಾನವಾಗ ಬೇಕಿರುವ 35 ರಾಜ್ಯಗಳಲ್ಲೂ ಸ್ಪರ್ಧೆ ನೀಡುವುದಾಗಿ ಅವರು ಹೇಳಿದ್ದಾರೆ. ಮ್ಯಾಸಚುಸೆಟ್ಸ್‌ನಲ್ಲಿ ಅವರು ಕ್ಲಿಂಟನ್ ವಿರುದ್ಧ ಪರಾಭವಗೊಂಡಿದ್ದಾರೆ.