ಸುಮಾತ್ರ ಸಮುದ್ರದಲ್ಲಿ ಭಾರೀ ಭೂಕಂಪ: ಸುನಾಮಿ ಎಚ್ಚರಿಕೆ; ಹಿಂದಕ್ಕೆ
ಜಕಾರ್ತ (ಇಂಡೋನೇಶ್ಯ), ಮಾ. 2: ಇಂಡೋನೇಶ್ಯದ ದ್ವೀಪ ಸುಮಾತ್ರದ ಪಶ್ಚಿಮ ಕರಾವಳಿಯಲ್ಲಿ ಬುಧವಾರ ಭಾರೀ ತೀವ್ರತೆಯ ಭೂಕಂಪ ಸಂಭವಿಸಿದೆ. ಆರಂಭದಲ್ಲಿ ಸುನಾಮಿ ಎಚ್ಚರಿಕೆಯನ್ನು ಅಧಿಕಾರಿಗಳು ಹೊರಡಿಸಿದರಾದರೂ, ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.9 ಆಗಿದ್ದು, ಪಶ್ಚಿಮ ಸುಮಾತ್ರ, ಉತ್ತರ ಸುಮಾತ್ರ ಮತ್ತು ಅಸೆಹ್‌ಗಳಿಗೆ ಸುನಾಮಿ ಎಚ್ಚರಿಕೆ ಹೊರಡಿಸಲಾಗಿತ್ತು ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಕಂಪದ ಕೇಂದ್ರ ಬಿಂದು ಪಡಂಗ್‌ನಿಂದ ನೈರುತ್ಯಕ್ಕೆ ಸಮುದ್ರದಲ್ಲಿ 808 ಕಿ.ಮೀ. ದೂರದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಭೂಕಂಪ ಅತ್ಯಂತ ಕಡಿಮೆ ಆಳದಲ್ಲಿ ಅಂದರೆ 10 ಕಿ.ಮೀ. ಆಳದಲ್ಲಿ ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರಬಲ ಸುನಾಮಿ ಅಲೆಗಳನ್ನು ನಿರೀಕ್ಷಿಸಲಾಗಿತ್ತು.
ಯುಎಸ್ ಜಿಯಾಲಜಿಕಲ್ ಸರ್ವೇ ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 8.2 ಹಾಗೂ ಬಳಿಕ 8.1 ಎಂಬುದಾಗಿ ಅಳೆಯಿತಾದರೂ, ಅಂತಿಮವಾಗಿ ಅದನ್ನು 7.9ಕ್ಕೆ ಇಳಿಸಲಾಯಿತು.
ಭೂಕಂಪದಿಂದ ತಕ್ಷಣಕ್ಕೆ ನಾಶ-ನಷ್ಟ ಸಂಭವಿಸಿದ ಬಗ್ಗೆ ವರದಿಗಳು ಬಂದಿಲ್ಲ.
2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಯಲ್ಲಿ ಇಂಡೋನೇಶ್ಯದ ಅಸೆಹ್ ಪ್ರಾಂತ ಸರ್ವನಾಶವಾಗಿತ್ತು.