×
Ad

ದೇಶವೆಂದರೆ ಪ್ರಧಾನಿಯಲ್ಲ, ಪ್ರಧಾನಿಯೆಂದರೆ ದೇಶವಲ್ಲ

Update: 2016-03-02 23:54 IST

ಸರಕಾರಕ್ಕೆ ಚಾಟಿ ಬೀಸಿದ ರಾಹುಲ್
ಹೊಸದಿಲ್ಲಿ: ಕಪ್ಪುಹಣ ಹೊಂದಿರುವವರಿಗೆ ಸರಕಾರದ ಕ್ಷಮಾದಾನ ಯೋಜನೆಯನ್ನು ಬುಧವಾರ ಲೋಕಸಭೆಯಲ್ಲಿ ಕಟುವಾಗಿ ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಪ್ರಧಾನಿ ಮೋದಿ ಕಪ್ಪು ಹಣವನ್ನು ಸಕ್ರಮಗೊಳಿಸಲು ‘ಫೇರ್ ಆ್ಯಂಡ್ ಲವ್ಲಿ’ ಕಾರ್ಯಕ್ರಮವನ್ನು ಆರಂಭಿಸಿದ್ದಾರೆಂದು ವ್ಯಂಗ್ಯವಾಡಿದರು. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರೆಸ್ಸೆಸ್ ವಿರುದ್ಧವೂಚಾಟಿ ಬೀಸಿದ ರಾಹುಲ್, ‘‘ನಾನು ಆರೆಸ್ಸೆಸ್‌ನವನಲ್ಲ. ಹೀಗಾಗಿ ನಾನು ತಪ್ಪುಗಳನ್ನು ಮಾಡುತ್ತೇನೆ. ಆದರೆ ನಿಮಗೆ ಹಾಗೂ ನಮಗೆ ಇರುವ ವ್ಯತ್ಯಾಸವೆಂದರೆ, ನೀವು ತಪ್ಪುಗಳನ್ನೇ ಮಾಡುವುದಿಲ್ಲ. ಆದರೆ ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಅವುಗಳಿಂದ ಪಾಠ ಕಲಿಯುತ್ತೇವೆ’’ ಎಂದರು.
ರಾಹುಲ್ ಭಾಷಣದ ವೇಳೆ ಸದನದಲ್ಲಿ ಪ್ರಧಾನಿ ಮೋದಿ ಅಥವಾ ಪ್ರಮುಖ ಕೇಂದ್ರ ಸಚಿವರಾಗಲಿ ಉಪಸ್ಥಿತರಿರಲಿಲ್ಲ. ಪ್ರಧಾನಿಯವರು ತನ್ನ ಸಚಿವರು ಸೇರಿದಂತೆ ಯಾರ ಮಾತನ್ನೂ ಕೇಳುತ್ತಿಲ್ಲವೆಂದು ಅವರು ಟೀಕಿಸಿದರು
ಕೇಂದ್ರ ಸರಕಾರದ ನೂತನ ಕಪ್ಪುಹಣ ಕ್ಷಮಾದಾನ ಯೋಜನೆಯನ್ನು ‘ಫೇರ್ ಆ್ಯಂಡ್ ಲವ್ಲಿ ಸ್ಕೀಮ್’ ಎಂದವರು ಟೀಕಿಸಿದರು.ಕಪ್ಪುಹಣವನ್ನು ತೊಲಗಿಸುವುದಾಗಿ ಮೋದಿ 2014ರಲ್ಲಿ ಭರವಸೆ ನೀಡಿದ್ದರು. ಈಗ ಯಾರೂ ಕೂಡಾ ತಮ್ಮ ಕಪ್ಪುಹಣದೊಂದಿಗೆ ಅರುಣ್ ಜೇಟ್ಲಿಯವರ ಬಳಿ ಬರಬಹುದಾಗಿದೆಯೆಂದು ಟೀಕಿಸಿದರು.
 ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಆರಂಭಿಸಿದ್ದ ನರೇಗಾದಂತಹ ಕಾರ್ಯಕ್ರಮಗಳ ಪರಿಣಾಮಕಾರಿತ್ವವನ್ನು ಕೇಂದ್ರ ಸರಕಾರವು ಒಪ್ಪಿಕೊಳ್ಳಬೇಕಾದಂತಹ ಪರಿಸ್ಥಿತಿ ಇಂದು ಬಂದಿದೆಯೆಂದರು. ‘‘ಜೇಟ್ಲಿ ಬಜೆಟ್ ಭಾಷಣ ಓದಿದಾಗ ಒಂದು ಕ್ಷಣ ನಾನು ಕಣ್ಣು ಮುಚ್ಚಿದೆ. ಆಗ ನನಗೆ ಪಿ.ಚಿದಂಬರಂ ಅವರೇ ಮಾತನಾಡುತ್ತಿರುವಂತೆ ಭಾಸವಾಯಿತು’’ ಎಂದರು.
ಈ ವರ್ಷದ ಆರಂಭದಲ್ಲಿ ಪಾಕ್‌ಗೆ ಮೋದಿಯವರ ದಿಢೀರ್ ಭೇಟಿಯನ್ನು ಅವರು ಬಲವಾಗಿ ಟೀಕಿಸಿದರು. ಭಯೋತ್ಪಾದನೆಯ ಬೆಂಬಲಿಗ ರಾಷ್ಟ್ರವೆಂದು ಪಾಕಿಸ್ತಾನವನ್ನು ಪ್ರತ್ಯೇಕಿಸಬೇಕೆಂಬ ನಮ್ಮ ಆರು ವರ್ಷಗಳ ಶ್ರಮವನ್ನು ಪ್ರಧಾನಿ ಏಕಾಂಗಿಯಾಗಿ ವಿಫಲಗೊಳಿಸಿದರು ಎಂದರು.
  ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಹಾಗೂ ಜೆಎನ್‌ಯು ವಿವಾದಕ್ಕೆ ಸಂಬಂಧಿಸಿ ಪ್ರಧಾನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾಹುಲ್, ‘‘ ಮೋದಿ ಅತ್ಯಂತ ಬಲಶಾಲಿ ವ್ಯಕ್ತಿ. ಅವರ ಬಗ್ಗೆ ಎಲ್ಲರಿಗೂ ಸ್ವಲ್ಪ ಹೆದರಿಕೆಯಿದೆ. ನನಗೆ ಕೂಡಾ. ಆದರೂ ಕೆಲವೊಮ್ಮೆ ಅವರಲ್ಲಿ ನಾವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ’’ ಎಂದರು.

ಮಹಾತ್ಮಗಾಂಧಿಯವರನ್ನು ಹಿಂದುತ್ವವಾದಿ ವೀರ ಸಾವರ್‌ಕರ್ ಜೊತೆಗೆ ತಾನು ಮಾಡಿದ ತುಲನೆಯನ್ನು ಬಿಜೆಪಿ ಸದಸ್ಯರು ಪ್ರತಿಭಟಿಸಿದಾಗ, ರಾಹುಲ್ ‘‘ಗಾಂಧಿ ನಮ್ಮವರು, ಸಾವರ್‌ಕರ್ ನಿಮ್ಮವರೆಂದು ನಾನು ಹೇಳಿದ್ದೆ.ನಾನು ಹೇಳಿದ್ದು ತಪ್ಪೇ?. ನೀವು ಸಾವರ್‌ಕರ್‌ರನ್ನು ತ್ಯಜಿಸಿಬಿಟ್ಟೀರಾ’’ ಎಂದು ರಾಹುಲ್ ಚಾಟಿಯೆಸೆದರು.

ಕಪ್ಪು ಹಣಕ್ಕೆ ಬೆಂಬಲ: ಆಕ್ರೋಶ

*ಪ್ರಧಾನಿ ತನಗೆ ತೋಚಿದಂತೆ ದೇಶವನ್ನು ನಡೆಸಕೂಡದು. ದೇಶವೆಂದರೆ ಪ್ರಧಾನಿಯಲ್ಲ. ಹಾಗೆಯೇ ಪ್ರಧಾನಿಯೆಂದರೆ ದೇಶವಲ್ಲ.

*ದಲಿತನೆಂಬ ಕಾರಣಕ್ಕೆ ನನ್ನನ್ನು ಯಾಕೆ ದಮನಿಸಬೇಕು ಎಂದು ರೋಹಿತ್ ವೇಮುಲಾ ಪ್ರಶ್ನಿಸಿದ್ದರು. ಕನ್ಹಯ್ಯಿ ಕುಮಾರ್ ಯಾವುದೇ ದೇಶದ್ರೋಹದ ಮಾತುಗಳನ್ನು ಆಡದಿದ್ದರೂ ಅವರನ್ನು ಬಂಧಿಸಲಾಗಿದೆ.
*ಕಪ್ಪುಹಣವನ್ನು ತೊಲಗಿಸುವುದಾಗಿ ಮೋದಿ 2014ರಲ್ಲಿ ಭರವಸೆ ನೀಡಿದ್ದರು. ಈಗ ಯಾರೂ ಕೂಡಾ ತಮ್ಮ ಕಪ್ಪುಹಣದೊಂದಿಗೆ ಅರುಣ್ ಜೇಟ್ಲಿ ಬಳಿ ಬರಬಹುದಾಗಿದೆ.
*ನರೇಗಾದಂತಹ ಕೆಟ್ಟ ಯೋಜನೆಯನ್ನು ನಾನೆಂದೂ ನೋಡಿಲ್ಲವೆಂದು ಮೋದೀಜಿ ಹೇಳಿದ್ದರು. ಆದರೆ ಅರುಣ್‌ಜೇಟ್ಲಿ ನನ್ನ ಬಳಿ ಬಂದು ಅದೊಂದು ಅತ್ಯುತ್ತಮ ಕಾರ್ಯಕ್ರಮವೆಂದು ಹೇಳಿದ್ದರು. ಆಗ ನಾನು ಅವರಿಗೆ ಈ ಮಾತನ್ನು ನೀವು ಯಾಕೆ ನಿಮ್ಮ ಬಾಸ್‌ಗೆ ಹೇಳಕೂಡದು ಎಂದು ಪ್ರಶ್ನಿಸಿದ್ದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News