×
Ad

ಎಂಟು ಮಾವೊವಾದಿಗಳ ಹತ್ಯೆ ಕುರಿತು ವಿಚಾರಣೆ ನಡೆಸಲಿರುವ ಹೈಕೋರ್ಟ್

Update: 2016-03-02 23:57 IST

ಹೈದರಾಬಾದ್: ನಕಲಿ ಎನ್‌ಕೌಂಟರ್ ನಡೆಸಲಾಗಿದೆ ಎಂದು ಆರೋಪಿಸಿ ಮಾನವ ಹಕ್ಕುಗಳ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲನ್ನೇರಿರುವುದರಿಂದ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಪೊಲೀಸರಿಂದ ಕೊಲ್ಲಲ್ಪಟ್ಟಿರುವ ಎಂಟು ಮಾವೊವಾದಿಗಳ ಶವಗಳನ್ನು ಸಂರಕ್ಷಿಸಿಡುವಂತೆ ಹೈದರಾಬಾದ್ ಉಚ್ಚ ನ್ಯಾಯಾಲಯವು ಬುಧವಾರ ತೆಲಂಗಾಣ ಸರಕಾರಕ್ಕೆ ನಿರ್ದೇಶ ನೀಡಿದೆ. ತೆಲಂಗಾಣ ನಾಗರಿಕ ಹಕ್ಕುಗಳ ಸಮಿತಿಯ ಪರ ವಕೀಲರಾದ ವಿ.ರಘುನಾಥ ಅವರು ಮುಖ್ಯ ನ್ಯಾಯಮೂರ್ತಿ ಡಿ.ಡಿ.ಭೋಸಲೆ ನೇತೃತ್ವದ ವಿಭಾಗೀಯ ಪೀಠದೆದುರು ವಿಷಯವನ್ನು ವೌಖಿಕವಾಗಿ ಪ್ರಸ್ತಾಪಿಸಿ ವರದಿಯೊಂದನ್ನು ಸಲ್ಲಿಸುವಂತೆ ರಾಜ್ಯಕ್ಕೆ ಆದೇಶಿಸುವಂತೆ ಕೋರಿಕೊಂಡರು.
ಸೂಕ್ತ ಅರ್ಜಿಯೊಂದನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಗುರುವಾರಕ್ಕೆ ನಿಗದಿಗೊಳಿಸಿತು.


ಮಂಗಳವಾರ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ತೆಲಂಗಾಣ ಪೊಲೀಸರ ನಕ್ಸಲ್ ನಿಗ್ರಹ ದಳ ಗ್ರೇಹೌಂಡ್ಸ್‌ನೊಂದಿಗಿನ ಗುಂಡಿನ ಕಾಳಗದಲ್ಲಿ ಐವರು ಮಹಿಳೆಯರು ಸೇರಿದಂತೆ ಎಂಟು ಮಾವೊವಾದಿಗಳು ಕೊಲ್ಲಲ್ಪಟ್ಟಿದ್ದರು. ಈ ಪ್ರದೇಶವು ತೆಲಂಗಾಣದ ಖಮ್ಮಾಮ್ ಜಿಲ್ಲೆಗೆ ಅತಿ ಸಮೀಪದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News