ಅಧಿಕಾರಿಗಳ ಭರವಸೆ: ಸುಳ್ಯ ಬಿಜೆಪಿ ಉಪವಾಸ ಸತ್ಯಾಗ್ರಹ ಅಂತ್ಯ

Update: 2016-03-03 12:22 GMT

ಸುಳ್ಯ: ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಲಿಖಿತ ಭರವಸೆ ನೀಡುವುದರೊಂದಿಗೆ ಸುಳ್ಯ ಮಂಡಲ ಬಿಜೆಪಿ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.

 ಬಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುಳ್ಯಕ್ಕೆ ಆಗಮಿಸಿದ್ದರು. ಪ್ರತಿಭಟನೆ ನಿರತರಲ್ಲಿಗೆ ಧಾವಿಸಿ ಮನವಿ ಸ್ವೀಕರಿಸಿ ಚರ್ಚೆ ನಡೆಸಿದರು. ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸುಕುಮಾರ್, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್.ಹೆಬ್ಬಾಳ್, ಮಂಗಳೂರು ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ದೀಪಕ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್, ಸಹಾಯಕ ಇಂಜಿನಿಯರ್‌ಗಳಾದ ಬಸವರಾಜ್, ವಿನೋದ್ ಕುಮಾರ್, ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಪೂಜಾರಿ, ಸುಳ್ಯದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕಾ ಪ್ರತಿಭಟನಾಕಾರರೊಂದಿಗೆ ಮಾತನಾಡಿ ತಾಂತ್ರಿಕ ಸಮಸ್ಯೆಯನ್ನು ವಿವರಿಸಿದರು.

110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಸರ್ವೆಗೆ ಇರುವ ಅಡ್ಡಿ ಮತ್ತು ನ್ಯಾಯಾಲಯ ತಕರಾರು ಕುರಿತಂತೆ ಅಧಿಕಾರಿಗಳು ವಿವರಿಸಿದಾಗ ಅಡ್ಡಿ ಇದ್ದರೆ ಕಾನೂನು ಪ್ರಕಾರ ಮುಂದುವರಿಯುವಂತೆ ನಾಯಕರು ಸಲಹೆ ನೀಡಿದರು. ನಮಗೆ ನಾಳೆಯಿಂದಲೇ ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರೆಂದು ತಿಳಿಸಬೇಕು ಎಂದು ಆಗ್ರಹಿಸಿದರು. ಆಗ ಏನೆಲ್ಲ ಸಾಧ್ಯತೆಗಳಿವೆಯೋ ಈ ಬಗ್ಗೆ ಪರೀಶೀಲನೆ ನಡೆಸಿ ಅನಿಯಮಿತ ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ಏಳು ದಿನದೊಳಗೆ ನಿವಾರಿಸುವುದಾಗಿ ಭರವಸೆ ನೀಡಿದರು. ಇದನ್ನು ಲಿಖಿತವಾಗಿ ನೀಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದಾಗ, ಲಿಖಿತವಾಗಿ ಅಧಿಕಾರಿಗಳು ಭರವಸೆ ನೀಡಿದರು. ಭರವಸೆ ಈಡೇರದಿದ್ದರೆ ಮುಂದೆ ಮೆಸ್ಕಾಂಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸುವುದಾಗಿ ಹರೀಶ್ ಕಂಜಿಪಿಲಿ ಎಚ್ಚರಿಸಿದರು. ಬಳಿಕ ಪ್ರತಿಭಟನಾನಿರತರು ಹಣ್ಣು ಸ್ವೀಕರಿಸುವ ಮೂಲಕ ಉಪವಾಸ ಕೊನೆಗೊಳಿಸಿದರು.

ಸರಕಾರವೇ ಹೊಣೆ:

ಸುಳ್ಯದ ವಿದ್ಯುತ್ ಅವ್ಯವಸ್ಥೆಗೆ ರಾಜ್ಯದ ಕಾಂಗ್ರೆಸ್ ಸರಕಾರ ನೇರ ಕಾರಣ. 110 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯ ಧೋರಣೆ ಹೀಗೆಯೇ ಮುಂದುವರಿದರೆ ತಾರ್ಕಿಕ ಅಂತ್ಯ ಸಿಗುವ ತನಕ ಬಿಜೆಪಿ ಪಕ್ಷ ಹೋರಾಟ ನಡೆಸಲಿದೆ ಎಂದು ಪ್ರತಭಟನೆಯ ಸಮಾರೋಪ ಭಾಷಣ ಮಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಹೇಳಿದರು. ಅನಿಯಮಿತ ವಿದ್ಯುತ್ ಕಡಿತ ತತ್‌ಕ್ಷಣ ನಿಲ್ಲಿಸಬೇಕು. ಲೋ ವೋಲ್ಟ್ಪೆಜ್ ಸಮಸ್ಯೆಗೆ ಪರಿಹಾರ ಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯವಾದ ಕಾರಣ ರಾತ್ರಿ ಹೊತ್ತು ಕರೆಂಟ್ ಕಟ್ ಮಾಡಬಾರದು ಎಂದು ಮೆಸ್ಕಾಂಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದರೂ 110 ಕೆ.ವಿ. ಸಬ್‌ಸ್ಟೇಷನ್‌ಗೆ ಅಡ್ಡಿ ಆಗಿರುವ ಅರಣ್ಯಭೂಮಿ ಬಿಡುಗಡೆಗೆ ಪ್ರಯತ್ನ ಮಾಡುತ್ತಿಲ್ಲ . ತಾಕತ್ತಿದ್ದರೆ ಅವರು ಅರಣ್ಯ ಕಾಯಿದೆಗೆ ತಿದ್ದುಪಡಿ ತರಲಿ ಎಂದರು.

ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ , ನ.ಪಂ. ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ , ಬಿಜೆಪಿ ರಾಜ್ಯ ಸಮಿತಿ ಸದಸ್ಯ ಪಿ.ಕೆ.ಉಮೇಶ್ ಮಾತನಾಡಿದರು. ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ, ಜಿ.ಪಂ. ಸದಸ್ಯರಾದ ಪುಷ್ಪಾವತಿ ಬಾಳಿಲ, ಎಸ್.ಎನ್. ಮನ್ಮಥ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಉಪಾಧ್ಯಕ್ಷೆ ಮೀನಾಕ್ಷಿ ಡಿ., ಸದಸ್ಯರಾದ ಮೋಹಿನಿ ನಾಗರಾಜ್, ಗೋಪಾಲ ನಡುಬೈಲು, ಕಿರಣ್ ಕುರುಂಜಿ, ಗೋಪಾಲ ನಡುಬೈಲು, ತಾ.ಪಂ.ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು, ಚನಿಯ ಕಲ್ತಡ್ಕ, ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ವಿಜಯಲಕ್ಷ್ಮಿ, ಮಾಜಿ ಜಿ.ಪಂ. ಸದಸ್ಯ ನವೀನ್‌ಕುಮಾರ್ ಮೇನಾಲ, ವಿನಯಕುಮಾರ್ ಕಂದಡ್ಕ, ಪ್ರಮೋದ್ ಪೈಲೂರು, ಸುವರ್ಣಿನಿ, ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ವೆಂಕಟ್ ವಳಲಂಬೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News