ಕನ್ಹಯ್ಯ ಅಸೆಂಬ್ಲಿ ಚುನಾವಣೆಗೆ ಸ್ಟಾರ್ ಪ್ರಚಾರಕ ?

Update: 2016-03-04 14:50 GMT

ಹೊಸದಿಲ್ಲಿ , ಮಾ. 4 : ಬಂಧಮುಕ್ತವಾದ ಬೆನ್ನಲ್ಲೇ ಜೆ ಎನ್ ಯು  ಗೆ ಬಂದು ಮಾಡಿದ ಭರ್ಜರಿ ಭಾಷಣದ ಮೂಲಕ ತಾನು ಯಾವುದೇ ವೃತ್ತಿಪರ ರಾಜಕಾರಣಿಗಿಂತ ಉತ್ತಮ ವಾಗ್ಮಿ ಎಂದು ತೋರಿಸಿಕೊಟ್ಟಿರುವ ವಿದ್ಯಾರ್ಥಿ ನಾಯಕ ಶೀಘ್ರವೇ ರಾಜಕೀಯ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಕನ್ಹಯ್ಯರನ್ನು ಮುಂಬರುವ ಕೇರಳ, ಪಶ್ಚಿಮ ಬಂಗಾಳ ಹಾಗು ಇತರ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ಸಿಪಿಐ ಪಕ್ಷ ಗಂಭೀರವಾಗಿ ಪರಿಶೀಲಿಸಲಿದೆ ಎಂದು ತಿಳಿದುಬಂದಿದೆ. " ನಾನು ವಿದ್ಯಾರ್ಥಿ , ನೇತಾ(ರಾಜಕಾರಣಿ ) ಅಲ್ಲ " ಎಂದು ಕನ್ಹಯ್ಯ ಹೇಳಿದ್ದರೂ ಅದು ಹೆಚ್ಚು ದಿನ ಹಾಗೆ ಉಳಿಯುವ ಸಾಧ್ಯತೆ ಕಂಡು ಬರುತ್ತಿಲ್ಲ.

"ದೇಶಾದ್ಯಂತ ವಿವಿಧ ಕಾರ್ಯಕ್ರಮಗಳಿಗೆ ಕನ್ಹಯ್ಯರನ್ನು ಕಳಿಸಲು ಕೋರಿ ಮನವಿಗಳ ಮಹಾಪೂರವೇ ನಮ್ಮ ಕಚೇರಿಗೆ ಹರಿದು ಬರುತ್ತಿದೆ. ಅವರನ್ನು ರಾಜಕೀಯಕ್ಕೆ ಬಳಸಬೇಕೆ ಮತ್ತು ಹೇಗೆ ಬಳಸಬೇಕು ಎಂಬುದರ ಬಗ್ಗೆ ಪಕ್ಷ ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದೆ " ಎಂದು ಪಕ್ಷದ ನಾಯಕ ಡಿ. ರಾಜಾ ಹೇಳಿದ್ದಾರೆ. ಕೇರಳದ ಸಿಪಿಐ ವಿದ್ಯಾರ್ಥಿ ಘಟಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು ಕನ್ಹಯ್ಯ ಅಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ  ಮಮತಾ ಅಲೆಯೆದುರು ಮಂಕಾಗಿರುವ ಹಾಗು ಕೇರಳದಲ್ಲಿ ಯುಡಿಎಫ್ ನಿಂದ ಅಧಿಕಾರ ಕಸಿಯಲು ಸಜ್ಜಾಗಿರುವ ಎಡರಂಗ ಕನ್ಹಯ್ಯರ ಜನಪ್ರಿಯತೆಯನ್ನು ಬಳಸದೆ ಇರುವ ಸಾಧ್ಯತೆ ಬಹಳ ಕಡಿಮೆ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News