ಅಮೆರಿಕ: ಗುರುದ್ವಾರದಲ್ಲಿ ದಾಂಧಲೆ; ದುಷ್ಕರ್ಮಿ ಬಂಧನ
ವಾಶಿಂಗ್ಟನ್, ಮಾ. 4: ದ್ವೇಷ ಅಪರಾಧವೆಂಬಂತೆ ಕಂಡುಬರುವ ಘಟನೆಯೊಂದರಲ್ಲಿ, ಅಮೆರಿಕದ ವಾಶಿಂಗ್ಟನ್ ರಾಜ್ಯದ ಸ್ಪೋಕ್ಯಾನ್ ಎಂಬಲ್ಲಿರುವ ಗುರುದ್ವಾರವೊಂದರಲ್ಲಿ ‘ನಗ್ನ’ ವ್ಯಕ್ತಿಯೋರ್ವ ದಾಂಧಲೆ ನಡೆಸಿದ್ದಾನೆ. ದುಷ್ಕರ್ಮಿಯು ಸಿಖ್ಖರ ಆರಾಧನಾ ಸ್ಥಳದಲ್ಲಿದ್ದ ಪವಿತ್ರ ವಸ್ತುಗಳನ್ನು ಬುಧವಾರ ರಾತ್ರಿ ಮಲಿನಗೊಳಿಸಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಪೊಲೀಸರು 44 ವರ್ಷದ ಜೆಫ್ರಿ ಸಿ. ಪಿಟ್ಮನ್ ಎಂಬಾತನನ್ನು ಗುರುವಾರ ಮುಂಜಾನೆಯ ಹೊತ್ತಿಗೆ ಬಂಧಿಸಿದ್ದಾರೆ. ಬಂಧನದ ವೇಳೆ ಆತನ ಮೈಮೇಲೆ ಯಾವುದೇ ಬಟ್ಟೆಯಿರಲಿಲ್ಲ. ಗುರುದ್ವಾರದಿಂದ ಪಡೆದ ಪ್ಲಾಸ್ಟಿಕ್ ಹಾಳೆಯಿಂದ ಆತನ ‘‘ಮಾನ ಮುಚ್ಚಿ’’ ಪೊಲೀಸರು ಕರೆದುಕೊಂಡು ಹೋದರು. ಬಂಧನದ ಸಂದರ್ಭದಲ್ಲಿ ಆತ ಗುರುದ್ವಾರದ ಪೂಜಿಸುವ ಖಡ್ಗವನ್ನು ಹಿಡಿದುಕೊಂಡಿದ್ದನು.
ಆತನ ವಿರುದ್ಧ ಕಳ್ಳತನ, ದುರುದ್ದೇಶದ ಕಿಡಿಗೇಡಿತನ ಮತ್ತು ದುರುದ್ದೇಶದ ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ ಎಂದು ‘ದ ಸಿಯಟಲ್ ಗ್ಲೋಬಲಿಸ್ಟ್’ ವರದಿ ಮಾಡಿದೆ.
‘‘ಎಲ್ಲ ಧರ್ಮಗಳನ್ನು ಗೌರವಿಸಬೇಕು. ಯಾರದಾದರೂ ಧಾರ್ಮಿಕ ನಂಬಿಕೆಗಳನ್ನು ಗುರಿಯಾಗಿಸಿ ಯಾರಾದರೂ ಅಪರಾಧ ಮಾಡಿದರೆ, ಅಂಥ ಅಪರಾಧಗಳ ತನಿಖೆಯನ್ನು ಆದ್ಯತೆಯ ಮೇಲೆ ನಡೆಸಲಾಗುತ್ತದೆ’’ ಎಂದು ಸ್ಪೋಕ್ಯಾನ್ ಶರೀಫ್ ಓಝೀ ನೆರೆವಿಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.