×
Ad

ಅಮೆರಿಕದ ಧಾರ್ಮಿಕ ಆಯೋಗಕ್ಕೆ ವೀಸಾ ನಿರಾಕರಣೆ

Update: 2016-03-04 23:48 IST

ವಾಶಿಂಗ್ಟನ್, ಮಾ.4: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರದ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಹಾಗೂ ವರದಿ ತಯಾರಿಸಲು ದೇಶಕ್ಕೆ ಭೇಟಿ ಕೊಡಲಿದ್ದ ಅಮೆರಿಕದ ಆಯೋಗವೊಂದಕ್ಕೆ ಭಾರತ ಸರಕಾರ ವೀಸಾ ನಿರಾಕರಿಸಿದೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರದ ಕುರಿತಾದ ಅಮೆರಿಕದ ಮೂವರು ಸದಸ್ಯರ ನಿಯೋಗವೊಂದು ಭಾರತದ ಸರಕಾರಿ ಅಧಿಕಾರಿಗಳು, ಧಾರ್ಮಿಕ ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಲು ಇಂದಿನಿಂದ ಆರಂಭಿಸಿ ಒಂದು ವಾರದ ಭೇಟಿಗೆ ಹೊರಡುವುದು ನಿಗದಿಯಾಗಿತ್ತು.
ಭಾರತ ಸರಕಾರ ವೀಸಾ ನಿರಾಕರಿಸಿದುದರಿಂದ ತಮಗೆ ಭಾರೀ ನಿರಾಸೆಯಾಗಿದೆಯೆಂದು ಅಮೆರಿಕನ್ ಆಯೋಗದ ಅಧ್ಯಕ್ಷ ರಾಬರ್ಟ್ ಪಿ.ಜಾರ್ಜ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬಹು ಸಂಸ್ಕೃತಿಯ,ಭಿನ್ನ ಮಾರ್ಗಾವಲಂಬಿಯಲ್ಲದ, ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಅಮೆರಿಕದ ನಿಕಟ ಭಾಗಿದಾರ ದೇಶವಾಗಿ ಭಾರತವು ತಮ್ಮ ಭೇಟಿಗೆ ಅವಕಾಶ ನೀಡುವ ವಿಶ್ವಾಸ ತೋರಿಸಬೇಕಿತ್ತೆಂದು ಅವರು ಹೇಳಿದ್ದಾರೆ.
ಅಮೆರಿಕನ್ ಆಯೋಗವು (ಯುಎಸ್‌ಸಿಐಆರ್‌ಎಫ್) ಪಾಕಿಸ್ತಾನ, ಸೌದಿ ಅರೇಬಿಯ, ವಿಯೆಟ್ನಾಂ, ಚೀನ ಹಾಗೂ ಬರ್ಮಾಗಳಂತಹ ಧಾರ್ಮಿಕ ಸ್ವಾತಂತ್ರದ ತೀವ್ರ ವಿರೋಧಿ ದೇಶಗಳು ಸೇರಿದಂತೆ ಅನೇಕ ದೇಶಗಳಿಗೆ ಪ್ರಯಾಣಿಸಲು ಸಮರ್ಥವಾಗಿದೆಯೆಂದು ಜಾರ್ಜ್ ಹೇಳಿದ್ದಾರೆ.
ಭಾರತವು ಈ ದೇಶಗಳಿಗಿಂತ ಹೆಚ್ಚು ಪಾರದರ್ಶಕತೆ ತೋರಿಸುತ್ತದೆ ಹಾಗೂ ಯುಎಸ್‌ಸಿಐಆರ್‌ಎಫ್‌ಗೆ ನೇರವಾಗಿ ತನ್ನ ಅಭಿಪ್ರಾಯ ತಿಳಿಸುವ ಅವಕಾಶವನ್ನು ಸ್ವಾಗತಿಸುವುದೆಂದು ಯಾರಾದರೂ ನಿರೀಕ್ಷಿಸಬೇಕಾಗಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.

ಯುಎಸ್‌ಸಿಐಆರ್‌ಎಫ್ ನಿಯೋಗವು ಇಂದು ಹೊರಡುವುದೆಂದು ನಿಗದಿಯಾಗಿತ್ತು. ಅದಕ್ಕೆ ಅಮೆರಿಕದ ರಾಜ್ಯಾಂಗ ಇಲಾಖೆ ಹಾಗೂ ಹೊಸದಿಲ್ಲಿಯ ಅಮೆರಿಕನ್ ರಾಯಭಾರ ಕಚೇರಿಗಳ ಬೆಂಬಲವಿತ್ತೆಂದು ಹೇಳಿಕೆ ತಿಳಿಸಿದೆ.
ಅಂತಾರಾಷ್ಟ್ರೀಯವಾಗಿ ಮತೀಯ ಸ್ವಾತಂತ್ರದ ಉಲ್ಲಂಘನೆಯ ವಾಸ್ತವ ಹಾಗೂ ಪರಿಸ್ಥಿತಿಯನ್ನು ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಗಳ ಕನ್ನಡಕದ ಮೂಲಕ ಪರಿಶೀಲಿಸುವುದು ಹಾಗೂ ಅಧ್ಯಕ್ಷರು, ರಾಜ್ಯಾಂಗ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ಗೆ ನೀತಿ ಶಿಫಾರಸುಗಳನ್ನು ಮಾಡುವುದು ಆಯೋಗದ ಪ್ರಧಾನ ಹೊಣೆಗಳಲ್ಲಿ ಸೇರಿದೆ.

2014ರಿಂದ ಭಾರತದಲ್ಲಿ ಮತೀಯ ಸ್ವಾತಂತ್ರ ಕುಸಿಯುತ್ತ ಬಂದಿದೆಯೆಂಬ ಮತೀಯ ಸಮುದಾಯಗಳ, ನಾಗರಿಕ ಸಮಾಜದ ಗುಂಪುಗಳು ಹಾಗೂ ಎನ್‌ಜಿಒ ವರದಿಗಳ ಹಿನ್ನೆಲೆಯಲ್ಲಿ ಯುಎಸ್‌ಸಿಐಆರ್‌ಎಫ್ ಭಾರತ ಭೇಟಿಯ ಬೆಂಬತ್ತುವಿಕೆಯನ್ನು ಮುಂದುವರಿಸಲಿದೆಯೆಂದು ಜಾರ್ಜ್ ಹೇಳಿದ್ದಾರೆ.
ಯುಎಸ್‌ಸಿಐಆರ್‌ಎಫ್, ಒಂದು ಸ್ವತಂತ್ರವಾದ ಅಮೆರಿಕದ ದ್ವಿ ಸದನ ಒಕ್ಕೂಟ ಸರಕಾರದ ಆಯೋಗವಾಗಿದೆ. ಅದರ ಆಯುಕ್ತರು ಅಧ್ಯಕ್ಷರು ಹಾಗೂ ಕಾಂಗ್ರೆಸ್‌ನ ಎರಡೂ ಸದನಗಳ ನಾಯಕರಿಂದ ಆಯ್ಕೆಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News