ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕ : ಅಂತಿಮ 3ರ ಪಟ್ಟಿಯಲ್ಲಿ ಶ್ರೀ ಶ್ರೀನಿವಾಸನ್
ವಾಶಿಂಗ್ಟನ್, ಮಾ. 5: ಅಮೆರಿಕದ ಸುಪ್ರೀಂ ಕೋರ್ಟ್‌ನ ತೆರವಾಗಿರುವ ನ್ಯಾಯಾಧೀಶ ಹುದ್ದೆಗೆ ಭಾರತೀಯ ಅಮೆರಿಕನ್ ಶ್ರೀ ಶ್ರೀನಿವಾಸನ್ ಸೇರಿದಂತೆ ಮೂವರು ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿದ್ದಾರೆ.
‘‘ಫೆಡರಲ್ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾದ ಮೆರಿಕ್ ಬಿ ಗಾರ್ಲಂಡ್ ಮತ್ತು ಶ್ರೀ ಶ್ರೀನಿವಾಸನ್‌ರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಗೆ ನೇಮಿಸುವ ವಿಚಾರದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಪರಿಶೀಲನೆ ನಡೆಸುತ್ತಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಹಿಂದೆ ರಿಪಬ್ಲಿಕನ್ನರಿಂದ ಉತ್ತಮ ಬೆಂಬಲ ಪಡೆದವರಾಗಿದ್ದಾರೆ’’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಶನಿವಾರ ವರದಿ ಮಾಡಿದೆ.
ಎಫ್‌ಬಿಐ, ನ್ಯಾಯಾಧೀಶರಾದ ಗಾರ್ಲಂಡ್ (63) ಮತ್ತು ಶ್ರೀನಿವಾಸನ್ (49)ರ ಹಿನ್ನೆಲೆ ತನಿಖೆ ನಡೆಸುತ್ತಿದೆ ಎಂಬುದಾಗಿ ಈ ಪ್ರಕ್ರಿಯೆ ಬಗ್ಗೆ ಮಾಹಿತಿಯಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಅದೇ ವೇಳೆ, ಶ್ವೇತಭವನವು ಫೆಡರಲ್ ವಿಚಾರಣಾ ನ್ಯಾಯಾಧೀಶೆ ಕೆಟಂಜಿ ಬ್ರೌನ್ ಜಾಕ್ಸನ್ (45)ರನ್ನೂ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಗಾಗಿ ಪರಿಶೀಲನೆ ನಡೆಸುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.
ಆದರೆ, ಈ ಬಗ್ಗೆ ಶ್ವೇತಭವನ ಯಾವುದೇ ಸೂಚನೆಯನ್ನು ನೀಡಿಲ್ಲ.
ಫೆಬ್ರವರಿ ತಿಂಗಳ ಆದಿ ಭಾಗದಲ್ಲಿ ಸುಪ್ರೀಂ ಕೋರ್ಟ್‌ನ ಇಟಲಿಯನ್ ಅಮೆರಿಕನ್ ನ್ಯಾಯಾಧೀಶ ಆ್ಯಂಟನಿನ್ ಸ್ಕೇಲಿಯ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಹುದ್ದೆ ತೆರವಾಗಿದೆ.
ಒಬಾಮರ ನೆಚ್ಚಿನ ಆಯ್ಕೆ
ಪದ್ಮನಾಭನ್ ಶ್ರೀಕಾಂತ್ ‘‘ಶ್ರೀ’’ ಶ್ರೀನಿವಾಸನ್ ಹಾಲಿ ಕೊಲಂಬಿಯ ಜಿಲ್ಲಾ ಸರ್ಕೀಟ್‌ಗೆ ಸಂಬಂಧಪಟ್ಟ ಅಮೆರಿಕ ಮೇಲ್ಮನವಿ ನ್ಯಾಯಾಲಯದ ಸರ್ಕೀಟ್ ನ್ಯಾಯಾಧೀಶರಾಗಿದ್ದಾರೆ. ಈ ಹುದ್ದೆ ಸುಪ್ರೀಂ ಕೋರ್ಟ್‌ಗೆ ನೆಗೆಯಲು ಇರುವ ಸೋಪಾನ ಎಂಬುದಾಗಿ ಹೆಚ್ಚಿನವರು ಭಾವಿಸಿದ್ದಾರೆ.
ಅವರು ಒಬಾಮರ ನೆಚ್ಚಿನ ಆಯ್ಕೆ ಮಾತ್ರವಲ್ಲ, ಅವರ ಅಭ್ಯರ್ಥಿ ನಾಮನಿರ್ದೇಶನವನ್ನು ದಾಖಲೆಯ 97-0 ಮತಗಳಿಂದ ಅನುಮೋದಿಸಲಾಗಿದೆ.
ಅಮೆರಿಕದ ಎರಡನೆ ಅತ್ಯಂತ ಪ್ರಭಾವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಶ್ರೀನಿವಾಸನ್ 2013 ಸೆಪ್ಟಂಬರ್ 26ರಂದು ಅಧಿಕಾರ ವಹಿಸಿಕೊಂಡಿದ್ದರು.