ಬಜೆಟ್‌ನಲ್ಲಿ ರಾಜೀವ್ ಗಾಂಧಿ ಹೆಸರಿನಲ್ಲಿರುವ ಯೋಜನೆಗಳಿಗೆ ಮರು ನಾಮಕರಣ

Update: 2016-03-05 18:23 GMT

ಹೊಸದಿಲ್ಲಿ,ಮಾ. 5: ಎನ್‌ಡಿಎ ಸರಕಾರದ ಮೂರನೆ ಮುಂಗಡ ಪತ್ರದಲ್ಲಿ ರಾಜಕೀಯ ಸಂದೇಶ ಅಡಗಿದ್ದು,ಅದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿರುವ ನಾಲ್ಕು ಯೋಜನೆಗಳ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಪಂಚಾಯತ್ ರಾಜ್ ಸಚಿವಾಲಯದ ಅಡಿಯಲ್ಲಿರುವ ವಿಕೇಂದ್ರೀಕರಣ ಯೋಜನೆಗಳಾದ ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಎಂಬ ಯೋಜನೆಯ ಹೆಸರನ್ನು ಎಪ್ರಿಲ್ 1 ರಿಂದ ಪಂಚಾಯತ್ ಸಶಕ್ತಿಕರಣ ಯೋಜನೆಯೆಂದು ಹೆಸರು ಮರುನಾಮಕರಣ ಗೊಳ್ಳಲಿದೆ ಎಂದು ಪಂಚಾಯತ್ ರಾಜ್ ಕಾರ್ಯದರ್ಶಿ ಎಸ್.ಎಮ್ ವಿಜಯಾನಂದ್ ಇಕಾನಾಮಿಕ್ ಟೈಮ್ಸ್ ಗೆ ಖಚಿತವಾಗಿ ತಿಳಿಸಿದ್ದಾರೆ.

 ಯೋಜನೆಗಳನ್ನು ಮುಂದಿನ ಹಣಕಾಸು ವರ್ಷಕ್ಕೆ ಪರಿಷ್ಕರಿಸಲಾಗುತ್ತದೆ .ನಾವು ಎಪ್ರಿಲ್‌ನಲ್ಲಿ ಅಂತಿಮ ಸುತ್ತಿನ ಸಮಾಲೋಚನೆಯ ಬಳಿಕ ಮಾರ್ಗದರ್ಶನಗಳನ್ನು ಪುನರ್ ಪರಿಷ್ಕರಣೆ ಮಾಡಲಿದ್ದೇವೆಂದು ಅವರು ತಿಳಿಸಿದರು.

 ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆಯನ್ನು ಆರಂಭಿಸಲಾಗಿತ್ತು. ರಾಜೀವ್ ಗಾಂಧಿಯವರನ್ನು ಪಂಚಾಯತ್ ರಾಜ್ ಸುಧಾರಣೆಯ ಶಿಲ್ಪಿಯೆಂದು ಕಾಂಗ್ರೆಸ್ ಪಕ್ಷ ಸದಾ ಘೋಷಿಸಿಕೊಂಡು ಬಂದಿದೆ.

 ವಿಕಲಚೇತನ ವಿದ್ಯಾರ್ಥಿಗಳಿಗೆ ಇದ್ದ ರಾಜೀವ್ ಗಾಂಧಿ ರಾಷ್ಟ್ರೀಯ ಶಿಷ್ಯವೇತನ ಹೆಸರನ್ನು ವಿಕಲಚೇತನ ವಿದ್ಯಾರ್ಥಿಗಳ ರಾಷ್ಟ್ರೀಯ ಶಿಷ್ಯವೇತನ ಎಂದು ಮರುನಾಮಕರಣಗೊಳಿಸಲಾಗಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕಚೇರಿ ನಿವೇದನೆ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಅನುಸೂಚಿತ ಜಾತಿಯವರಿಗೆ ನೀಡಲ್ಪಡುತ್ತಿದ್ದ ರಾಜೀವ್ ಗಾಂಧಿ ರಾಷ್ಟ್ರೀಯ ಶಿಷ್ಯವೇತನವನ್ನು ರಾಷ್ಟ್ರೀಯ ಶಿಷ್ಯವೇತನ ಅನುಸೂಚಿತ ಜಾತಿಯವರಿಗೆ ಎಂದು ಮರುನಾಮಕರಣಗೊಳಿಸಲಾಗಿದೆ. ಅದೇರೀತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನ್‌ನನ್ನು ಖೇಲೊ ಇಂಡಿಯಾ ಎಂಬ ಅಂಬ್ರೆಲ್ಲ ಯೋಜನೆಯಾಗಿ ಒಳಗೊಳ್ಳುವ ಸಂಭವವಿದೆ ಎನ್ನಲಾಗಿದೆ.

  ಈ ಮೊದಲು ಎನ್‌ಡಿಎ ಸರಕಾರ ರಾಜೀವ್ ಗಾಂಧಿ ಹೆಸರನಲ್ಲಿದ್ದ ಯೋಜನೆಗಳಾದ ದುರ್ಬಲ ವರ್ಗ ಮತ್ತು ಕಡಿಮೆ ಆದಾಯದವರಿಗೆ ಇರುವ ವಸತಿ ಅಗತ್ಯ ಯೋಜನೆಯಾದ ರಾಜೀವ್ ರಿನ್ನಾ ಯೋಜನೆ ಹಾಗೂ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ದೀನದಯಾಳ್ ಉಪಾಧ್ಯಾಯ ಎಂದು ಎನ್‌ಡಿಎ ಸರಕಾರ ಮರು ನಾಮಕರಣಗೊಳಿಸಿತ್ತು. ಇದೀಗ ಈ ಯೋಜನೆ ಎನ್‌ಡಿಎ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News