ಮಧ್ಯಪ್ರದೇಶ: ಭೂಗತ ಸ್ಫೋಟಕ್ಕೆ ಒಬ್ಬ ಬಲಿ
ಭೋಪಾಲ್: ಭೂಮಿಯ ತಳಬಾಗದಲ್ಲಿ ಉತ್ಪತ್ತಿಯಾದ ಅನಿಲವೊಂದರಿಂದ ಭೀಕರ ಸ್ಫೋಟ ಸಂಭವಿಸಿ, 65 ವರ್ಷದ ಮಹಿಳೆ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿರುವ ಘಟನೆ ದಮೋಹ್ ಜಿಲ್ಲೆಯಲ್ಲಿ ನಡೆದಿದೆ.
ದಹಿಸುವ ಅನಿಲದ ಸೋರಿಕೆ ಭೂಮಿಯ ಒಳಬಾಗದಲ್ಲಿ ಕಾಣಿಸಿಕೊಂಡು, ಸ್ಫೋಟ ಸಂಭವಿಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ ಶರ್ಮಾ ಹೇಳಿದ್ದಾರೆ. ಭೂಗಭರ್ ಶಾಸ್ತ್ರಜ್ಞರೂ ಸೇರಿದಂತೆ ತಜ್ಞರ ತಂಡವನ್ನು ಇದರ ತನಿಖೆಗೆ ನೇಮಿಸಲಾಗಿದ್ದು, ಪೊಲೀಸ್ ಪ್ರಕರಣ ಕೂಡಾ ದಾಖಲಾಗಿದೆ. ವಿಶೇಷ ಸಶಸ್ತ್ರ ಪಡೆಯ ಸಿಬ್ಬಂದಿ ವೃಂದಾವನ ಅಹ್ರಿವಾರ್ ಹಾಗೂ ಅವರ ಪತ್ನಿ ಶೀಲರಾಣಿ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ತಾಯಿ ರಾಜಪ್ಯಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ಅದು ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಎಂದು ಅಂದಾಜಿಸಲಾಗಿತ್ತು. ಆದರೆ ಪೊಲೀಸರು ತಪಾಸಣೆ ನಡೆಸಿದಾಗ, ಎಲ್‌ಪಿಜಿ ಸಿಲಿಂಡರ್ ಸುಸ್ಥಿತಿಯಲ್ಲಿದ್ದುದು ಕಂಡುಬಂತು ಎಂದು ಹೆಚ್ಚುವರಿ ಎಸ್ಪಿ ಅರವಿಂದ್ ದುಬೆ ತಿಳಿಸಿದರು. ಮನೆಯ ಆವರಣದಲ್ಲಿ ಕೊಳವೆಬಾವಿ ಇದ್ದು, ಜಿಲ್ಲೆಯಲ್ಲಿ ಕೊಳವೆಬಾವಿಗಳಿಂದ ಅನಿಲ ಹೊರಬಂದು ಬೆಂಕಿ ಹತ್ತಿಕೊಂಡ ಹಲವು ಘಟನೆಗಳನ್ನು ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ಅಂಥ ಅನಿಲ ಮನೆಯಲ್ಲಿ ರಾತ್ರಿ ತುಂಬಿಕೊಂಡು ಮುಂಜಾನೆ ಸ್ಫೋಟ ಸಂಭವಿಸಿರಬೇಕು ಎಂದು ಅವರು ವಿವರಿಸಿದ್ದಾರೆ.