ಖ್ಯಾತ ಇಸ್ಲಾಮಿಕ್ ಚಿಂತಕ, ರಾಜಕೀಯ ಮುತ್ಸದ್ದಿ ಹಸನ್ ಅಲ್ ತುರಾಬಿ ನಿಧನ

Update: 2016-03-06 11:04 GMT

ಸುಡಾನ್: ಸುಡಾನ್‌ನ ಪ್ರತಿಪಕ್ಷ ನಾಯಕ, ಖ್ಯಾತ ಇಸ್ಲಾಮಿಕ್ ಚಿಂತಕ ಹಸನ್ ಅಲ್ ತುರಾಬಿ ಸುಡಾನ್‌ನ ರಾಜಧಾನಿ ಖಾರ್ತುಮ್‌ನಲ್ಲಿ ಶನಿವಾರ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು.
ತುರಾಬಿ ಅವರು ತನ್ನ ಕಚೇರಿಯಲ್ಲಿ ಕುಸಿದು ಬಿದ್ದಿದ್ದರಿಂದ ಅವರನ್ನು ಸುಡಾನ್‌ನ ರಾಯಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರ ಸಾವಿನ ಕಾರಣ ತಕ್ಷಣಕ್ಕೆ ತಿಳಿದುಬರಲಿಲ್ಲ. ಆದರೆ ಅವರು ಮೆದುಳಿನ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿ (ಪಿಸಿಪಿ)ಯ ಸದಸ್ಯರು ತಿಳಿಸಿದ್ದಾರೆ.
ತುರಾಬಿ ಅವರು ಸ್ಥಳೀಯ ಸಮಯ ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಸುಡಾನ್‌ನ ಪತ್ರಕರ್ತ ಅಹ್ಮದ್ ಸಯೀದ್, ಅಲ್‌ಜಝೀರಾಗೆ ತಿಳಿಸಿದ್ದಾರೆ.
ಹಸನ್ ಅಲ್ ತುರಾಬಿ ಅವರು ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿಯ ಸ್ಥಾಪಕರಾಗಿದ್ದು, 1989ರಲ್ಲಿ ಸುಡಾನ್‌ನಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಬಳಿಕ ಉಮರ್ ಅಲ್ ಬಶೀರ್ ನೇತೃತ್ವದ ನೂತನ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆ ಸರಕಾರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಹಸನ್ ಅಲ್ ತುರಾಬಿ ಅವರು ದೇಶದಲ್ಲಿ ಇಸ್ಲಾಮೀ ಶರೀಯತ್ ಕನೂನುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದರು.
ಸುಡಾನಿ ಇಸ್ಲಾಮೀ ಆಂದೋಲನದ ನೇತಾರರಾಗಿದ್ದ ತುರಾಬಿ ಅವರು ಇಂಗ್ಲೆಂಡ್‌ನಲ್ಲಿ ಹಾಗೂ ಪ್ಯಾರಿಸ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಬಳಿಕ ಖಾರ್ತುಮ್ ವಿವಿಯ ಕಾನೂನು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಹಸನ್ ಅಲ್ ತುರಾಬಿ ಅವರು ಅರಬಿಕ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News