×
Ad

ಚೀನಾ: ಲಿಫ್ಟ್‌ನಲ್ಲಿ ಮಹಿಳೆಯ ಶವ ತಿಂಗಳ ಬಳಿಕ ಪತ್ತೆ

Update: 2016-03-06 19:45 IST

ಬೀಜಿಂಗ್, ಮಾ. 6: ಚೀನಾದ ನಗರ ಕ್ಸಿಯಾನ್‌ನಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡವೊಂದರ ಲಿಫ್ಟ್‌ನಲ್ಲಿ ಮಹಿಳೆಯೊಬ್ಬರ ಕೊಳೆತುಹೋದ ಶವವೊಂದು ಪತ್ತೆಯಾಗಿದೆ.
ಒಂದು ತಿಂಗಳ ಹಿಂದೆ ಲಿಫ್ಟ್‌ನ ನಿರ್ವಹಣಾ ಸಿಬ್ಬಂದಿ ದುರಸ್ತಿಗಾಗಿ ಒಳಗೆ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸದೆಯೇ ಅದರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಆ ಸಮಯದಲ್ಲಿ ಮಹಿಳೆ ಲಿಫ್ಟ್ ಬಳಸಿರಬೇಕೆಂದು ಶಂಕಿಸಲಾಗಿದೆ. ಲಿಫ್ಟ್ ನಿಂತುಹೋದಾಗ ಹೊರಬರಲಾಗದೆ ಉಸಿರುಗಟ್ಟಿ ಅವರು ಪ್ರಾಣ ಬಿಟ್ಟಿರಬೇಕೆಂದು ಭಾವಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ, ಕ್ರಿಮಿನಲ್ ನಿರ್ಲಕ್ಷಕ್ಕಾಗಿ ಇಬ್ಬರು ಲಿಫ್ಟ್ ನಿರ್ವಹಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಲಿಫ್ಟ್‌ನಲ್ಲಿ ಸಮಸ್ಯೆ ಇದೆ ಎಂಬುದಾಗಿ ಬಂದ ಕರೆಯ ಹಿನ್ನೆಲೆಯಲ್ಲಿ, ಒಳಗೆ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸದೆ ಈ ಸಿಬ್ಬಂದಿ ಜನವರಿ 30ರಂದು ಲಿಫ್ಟ್‌ಗೆ ವಿದ್ಯುತ್ ಪೂರೈಕೆಯನ್ನು ಕಡಿಗೊಳಿಸಿದ್ದರು ಎಂದು ಹೇಳಿಕೆಯೊಂದರಲ್ಲಿ ಗಾವೊಲಿಂಗ್ ಜಿಲ್ಲಾಡಳಿತ ತಿಳಿಸಿದೆ.

ದುರಸ್ತಿಗಾಗಿ ಒಂದು ತಿಂಗಳ ಬಳಿಕ, ಅಂದರೆ ಮಾರ್ಚ್ 1ರಂದು, ಸಿಬ್ಬಂದಿ ಬಂದಾಗ ಲಿಫ್ಟ್‌ನಲ್ಲಿ ಮಹಿಳೆಯೊಬ್ಬರ ಶವವನ್ನು ಕಂಡರು ಎಂದು ಅದು ಹೇಳಿದೆ.
43 ವರ್ಷದ ಈ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News