ಸಾಕ್ಷಕ್ಕಾಗಿ 24 ಸಾಕ್ಷಿಗಳನ್ನು ಕಳುಹಿಸಿಕೊಡಿ ಭಾರತಕ್ಕೆ ಪಾಕ್ ಸೂಚನೆ: ಮುಂಬೈ ಭಯೋತ್ಪಾದಕ ದಾಳಿ ವಿಚಾರಣೆ

Update: 2016-03-06 14:19 GMT

ಲಾಹೋರ್, ಮಾ. 6: 2008ರ ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನದಲ್ಲಿ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಎಲ್ಲ 24 ಭಾರತೀಯ ಸಾಕ್ಷಿಗಳನ್ನು ಕಳುಹಿಸಿಕೊಡುವಂತೆ ಪಾಕಿಸ್ತಾನ ಭಾರತಕ್ಕೆ ಸೂಚಿಸಿದೆ ಎಂದು ಪ್ರಕರಣದ ಮುಖ್ಯ ಪ್ರಾಸಿಕ್ಯೂಟರ್ ಇಂದು ತಿಳಿಸಿದರು.

‘‘ಮುಂಬೈ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂದಿಸಿ ವಿಚಾರಣಾ ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ದಾಖಲಿಸಲು ಪಾಕಿಸ್ತಾನಕ್ಕೆ ಎಲ್ಲ 24 ಭಾರತೀಯ ಸಾಕ್ಷಿಗಳನ್ನು ಕಳುಹಿಸಿಕೊಡುವಂತೆ ಕೋರಿ ವಿದೇಶ ಸಚಿವಾಲಯವು ಭಾರತ ಸರಕಾರಕ್ಕೆ ಪತ್ರ ಬರೆದಿದೆ’’ ಎಂದು ಪ್ರಾಸಿಕ್ಯೂಶನ್ ಮುಖ್ಯಸ್ಥ ಚೌಧರಿ ಅಝರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇಸ್ಲಾಮಾಬಾದ್‌ನಲ್ಲಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲ ಪಾಕಿಸ್ತಾನಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ ಎಂದು ಅವರು ನುಡಿದರು. ಪಾಕಿಸ್ತಾನದಲ್ಲಿ ಪ್ರಕರಣದ ವಿಚಾರಣೆ ಆರು ವರ್ಷಗಳಿಗೂ ಹೆಚ್ಚು ಅವಧಿಯಿಂದ ನಡೆಯುತ್ತಿದೆ.

‘‘ಈಗ ಚೆಂಡು ಭಾರತದ ಅಂಗಳದಲ್ಲಿದೆ. ಪ್ರಕರಣದ ಎಲ್ಲ ಭಾರತೀಯ ಸಾಕ್ಷಿಗಳನ್ನು ಸಾಕ್ಷಿ ಹೇಳಲು ಈಗ ಭಾರತ ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು. ಹಾಗಾದರೆ, ಪಾಕಿಸ್ತಾನದ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯಬಹುದು’’ ಎಂದು ಫೆಡರಲ್ ಇನ್‌ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ)ಯ ವಿಶೇಷ ಪ್ರಾಸಿಕ್ಯೂಟರ್ ಕೂಡ ಆಗಿರುವ ಅಝರ್ ಹೇಳಿದರು.

ಮುಂಬೈ ದಾಳಿಯ ರೂವಾರಿ ಹಾಗೂ ಎಲ್‌ಇಟಿ ಆಪರೇಶನ್ಸ್ ಕಮಾಂಡರ್ ಝಕೀವುರ್ ರಹ್ಮಾನ್ ಲಖ್ವಿ ಸೇರಿದಂತೆ ಏಳು ಆರೋಪಿಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯ, ಸಾಕ್ಷಗಳನ್ನು ದಾಖಲಿಸುವುದಕ್ಕಾಗಿ ಎಲ್ಲ 24 ಭಾರತೀಯ ಸಾಕ್ಷಿಗಳನ್ನು ಹಾಜರುಪಡಿಸುವಂತೆ ಕಳೆದ ತಿಂಗಳು ಎಫ್‌ಐಎಗೆ ಆದೇಶ ನೀಡಿತ್ತು.

ಅಜ್ಮಲ್ ಕಸಬ್ ಮತ್ತು ಇತರ ಭಯೋತ್ಪಾದಕರು ಬಳಸಿದ್ದ ದೋಣಿಗಳನ್ನೂ ಪಾಕಿಸ್ತಾನಕ್ಕೆ ತರುವಂತೆ ನ್ಯಾಯಾಲಯ ಸೂಚಿಸಿತ್ತು. ದೋಣಿಗಳು ಮೊಕದ್ದಮೆಯ ಸೊತ್ತಾಗಿದ್ದು, ಅವುಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಅದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News