ಇಸ್ಲಾಮಿಕ್ ಚಿಂತಕ ಹಸನ್ ಅಲ್ ತುರಾಬಿ ನಿಧನ

Update: 2016-03-06 14:24 GMT

ಖಾರ್ತುಮ್ (ಸುಡಾನ್), ಮಾ. 6: ಸುಡಾನ್‌ನ ಪ್ರತಿಪಕ್ಷ ನಾಯಕ, ಖ್ಯಾತ ಇಸ್ಲಾಮಿಕ್ ಚಿಂತಕ ಹಸನ್ ಅಲ್ ತುರಾಬಿ ಸುಡಾನ್‌ನ ರಾಜಧಾನಿ ಖಾರ್ತುಮ್‌ನಲ್ಲಿ ಶನಿವಾರ ನಿಧನರಾಗಿದ್ದಾರೆ.

ಅವರಿಗೆ 84 ವರ್ಷ ವಯಸ್ಸಾಗಿತ್ತು.

ತುರಾಬಿ ಅವರು ತನ್ನ ಕಚೇರಿಯಲ್ಲಿ ಕುಸಿದು ಬಿದ್ದಿದ್ದು, ಅವರನ್ನು ಸುಡಾನ್‌ನ ರಾಯಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅವರ ಸಾವಿನ ಕಾರಣ ತಕ್ಷಣಕ್ಕೆ ತಿಳಿದುಬರಲಿಲ್ಲ. ಆದರೆ ಅವರು ಮೆದುಳಿನ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿ (ಪಿಸಿಪಿ)ಯ ಸದಸ್ಯರು ತಿಳಿಸಿದ್ದಾರೆ.

ತುರಾಬಿ ಅವರು ಸ್ಥಳೀಯ ಸಮಯ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಸುಡಾನ್‌ನ ಪತ್ರಕರ್ತ ಅಹ್ಮದ್ ಸಯೀದ್ ಅಲ್‌ಜಝೀರಾಗೆ ತಿಳಿಸಿದ್ದಾರೆ.
ಹಸನ್ ಅಲ್ ತುರಾಬಿ ಅವರು ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿಯ ಸ್ಥಾಪಕರಾಗಿದ್ದು, 1989ರಲ್ಲಿ ಸುಡಾನ್‌ನಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಬಳಿಕ ಉಮರ್ ಅಲ್ ಬಶೀರ್ ನೇತೃತ್ವದ ನೂತನ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆ ಸರಕಾರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಹಸನ್ ಅಲ್ ತುರಾಬಿ ಅವರು ದೇಶದಲ್ಲಿ ಇಸ್ಲಾಮೀ ಶರೀಯತ್ ಕಾನೂನುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದರು.

ಸುಡಾನಿ ಇಸ್ಲಾಮೀ ಆಂದೋಲನದ ನೇತಾರರಾಗಿದ್ದ ತುರಾಬಿ ಅವರು ಇಂಗ್ಲೆಂಡ್‌ನಲ್ಲಿ ಹಾಗೂ ಪ್ಯಾರಿಸ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಬಳಿಕ ಖಾರ್ತುಮ್ ವಿವಿಯ ಕಾನೂನು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಹಸನ್ ಅಲ್ ತುರಾಬಿ ಅವರು ಅರಬಿಕ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.

ಹೋರಾಟದ ಜೀವನ

1989ರ ಕ್ಷಿಪ್ರ ಕ್ರಾಂತಿಯಲ್ಲಿ ಹಸನ್ ಅಲ್-ತುರಾಬಿ ಮಹತ್ವದ ಪಾತ್ರ ವಹಿಸಿದ್ದರು. ಈ ಕ್ಷಿಪ್ರಕ್ರಾಂತಿಯ ಬಳಿಕ ಉಮರ್ ಅಲ್ ಬಶೀರ್ ಸುಡಾನ್‌ನ ಅಧ್ಯಕ್ಷರಾದರು ಎನ್ನುವುದನ್ನು ಸ್ಮರಿಸಬಹುದಾಗಿದೆ.

1999ರಲ್ಲಿ ಅಧ್ಯಕ್ಷರ ಅಧಿಕಾರವನ್ನು ಕಡಿತಗೊಳಿಸುವ ಉದ್ದೇಶದ ಮಸೂದೆಗೆ ತುರಾಬಿ ಬೆಂಬಲ ವ್ಯಕ್ತಪಡಿಸಿದಾಗ, ಅವರನ್ನು ಪಾರ್ಲಿಮೆಂಟ್ ಸ್ಪೀಕರ್ ಹುದ್ದೆಯಿಂದ ಅಧ್ಯಕ್ಷ ಬಶೀರ್ ವಜಾಗೊಳಿಸಿದರು.

ಆಗ ಅವರು ಪಾಪ್ಯುಲರ್ ಕಾಂಗ್ರೆಸ್ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿದರು.

ಅವರು ಹಲವು ಬಾರಿ ಜೈಲಿಗೆ ಹೋದರು ಹಾಗೂ ಎರಡು ವರ್ಷಗಳಿಗೂ ಅಧಿಕ ಕಾಲ ಗೃಹ ಬಂಧನದಲ್ಲಿದ್ದರು.

ಧಾರ್ಮಿಕ ನ್ಯಾಯಾಧೀಶರ ಮಗನಾಗಿ 1932ರಲ್ಲಿ ಜನಿಸಿದ ಅಲ್-ತುರಾಬಿ ಜೀವನ ಪರ್ಯಂತ ಇಸ್ಲಾಮ್‌ನ ವಿದ್ವಾಂಸರಾಗಿದ್ದರು. ನಗುಮೊಗದ ಹಾಗೂ ಮೃದು ಮಾತಿನ ಅವರು ಸುಧಾರಣಾವಾದಿ ಧಾರ್ಮಿಕ ವಿದ್ವಾಂಸರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News