×
Ad

ಅನಂತಕುಮಾರ್ ಹೆಗಡೆ ಹೇಳಿಕೆಗೆ ಸಚಿವರ ಬೆಂಬಲ?

Update: 2016-03-06 23:50 IST

 ಇತ್ತೀಚೆಗೆ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ‘ಇಡೀ ಮುಸ್ಲಿಮರನ್ನೇ ಮೂಲೋತ್ಪಾಟನೆ ಮಾಡಬೇಕು’ ಎಂದು ಕರೆ ನೀಡಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ದ್ವೇಷದ ಬೀಜ ಬಿತ್ತಲು ಯತ್ನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಯಿತು. ಈ ಹಿಂದೆ, ಹೈದರಾಬಾದ್‌ನಲ್ಲಿ ಅಕ್ಬರುದ್ದೀನ್ ಉವೈಸಿ ಎಂಬ ರಾಜಕಾರಣಿಯೊಬ್ಬರು ಉದ್ವಿಗ್ನಕಾರಿ ಹೇಳಿಕೆಯೊಂದನ್ನು ನೀಡಿದ್ದರು. ಹಾಗೆ ನೀಡಿದ ಎರಡೇ ದಿನದಲ್ಲಿ ಅವರ ಬಂಧನವಾಯಿತು. ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಯಿತು. ಆದರೆ, ಅನಂತಕುಮಾರ್ ಹೆಗಡೆ, ಉವೈಸಿ ನೀಡಿರುವ ಹೇಳಿಕೆಗಿಂತಲೂ ಹೆಚ್ಚು ಉದ್ವಿಗ್ನಕಾರಿ, ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪರೋಕ್ಷವಾಗಿ ಕೊಲೆ, ದೊಂಬಿಗೆ ಅವರು ಕರೆ ನೀಡಿದ್ದಾರೆ. ಸಂಸದನಾಗಿ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಹಿನ್ನೆಲೆಯಲ್ಲಿ, ಮತ್ತೆ ಚಲಾವಣೆಯಲ್ಲಿರಲು ಅವರು ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇದರಿಂದ ಸಂತ್ರಸ್ತರಾಗುವುದು ಜನಸಾಮಾನ್ಯರೇ ತಾನೆ. ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅನಂತಕುಮಾರ್ ಹೆಗಡೆ ಜೈಲಲ್ಲಿರಬೇಕಾಗಿತ್ತು. ಇಂತಹದೊಂದು ದೇಶದ್ರೋಹಿ, ಮನುಷ್ಯ ದ್ರೋಹಿ ಹೇಳಿಕೆಗೆ ಹೆಗಡೆಗೆ ಜೀವಾವಧಿ ಶಿಕ್ಷೆಯಾಗಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ದಲಿತ ನಾಯಕರೊಬ್ಬರು ಗೃಹ ಸಚಿವರಾಗಿದ್ದರೂ ಇನ್ನೂ ಕ್ರಮ ತೆಗೆದುಕೊಳ್ಳಲಾಗಿಲ್ಲ.
 

ವಿಶೇಷವೆಂದರೆ, ಹೆಗಡೆಯ ಹೇಳಿಕೆಯ ಬಗ್ಗೆ ಹಲವು ಕಾಂಗ್ರೆಸ್ ನಾಯಕರು ಖಂಡನಾ ಹೇಳಿಕೆ ನೀಡಿದ್ದಾರಾದರೂ, ಉತ್ತರಕನ್ನಡದವರೇ ಆಗಿರುವ ಆರ್.ವಿ.ದೇಶಪಾಂಡೆ ಮತ್ತು ಸಚಿವ ವಿನಯಕುಮಾರ್ ಸೊರಕೆ ವೌನವಾಗಿರುವುದು ನಿಗೂಢವಾಗಿದೆ. ಈ ವೌನದ ಅರ್ಥವೇನು? ದೇಶಪಾಂಡೆ ಮತ್ತು ಸೊರಕೆಯವರು ಅನಂತಕುಮಾರ್ ಹೆಗಡೆಯವರ ಹೇಳಿಕೆಗೆ ಪರೋಕ್ಷ ಬೆಂಬಲ ನೀಡಿದ್ದಾರೆಯೇ? ಅವರ ಹೇಳಿಕೆಗೆ ದೇಶಪಾಂಡೆ ಮತ್ತು ವಿನಯಕುಮಾರ್ ಸೊರಕೆಯ ಸಮ್ಮತಿಯಿದೆಯೇ? ಈ ಇಬ್ಬರು ನಾಯಕರು ತಮ್ಮ ಮೃದು ಹಿಂದುತ್ವಕ್ಕಾಗಿ ಈಗಾಗಲೇ ಟೀಕೆಗೊಳಗಾಗಿದ್ದಾರೆ. ಮುಸ್ಲಿಮರ ಕುರಿತಂತೆ ಇವರು ಅಸಹನೆಯನ್ನು ಹೊಂದಿದ್ದಾರೆ ಎನ್ನುವ ಆರೋಪಕ್ಕೆ ಪೂರಕವಾಗಿ, ಹೆಗಡೆಯ ವಿರುದ್ಧ ಒಂದು ಮಾತನ್ನು ಆಡದೆ ಇರುವುದು ಇವರ ನಕಲಿ ಸೆಕ್ಯುಲರಿಸಂಗೆ ಉದಾಹರಣೆಯಾಗಿದೆ. ಇಂಥವರಿಂದಲೇ ಇಂದು ಕಾಂಗ್ರೆಸ್, ಯಾರಿಗೂ ಬೇಡವಾದ ಪಕ್ಷವಾಗಿ ಕುಸಿಯುತ್ತಿದೆ. ಬಹುಶಃ ಹೆಗಡೆಯ ಬಂಧನವಾಗದೇ ಇರುವಲ್ಲಿ ಈ ಇಬ್ಬರು ಸಚಿವರ ಪಾತ್ರ ಎಷ್ಟು ಎಂದು ರಾಜ್ಯದ ಜನರು ಪ್ರಶ್ನಿಸುವಂತಾಗಿದೆ. -ರಾಕೇಶ್ ಪಿಂಟೋ, ಕಾರವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News