ಶಾಂತಿ, ಸಮೃದ್ಧಿಗೆ ಟ್ರಂಪ್ ಬೆದರಿಕೆ
ಬರ್ಲಿನ್, ಮಾ. 6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಬಲಪಂಥೀಯ ಜನಮರುಳು ರಾಜಕಾರಣಿಯಾಗಿದ್ದು, ಅವರ ರಾಜಕೀಯ ನಿಲುವುಗಳು ಶಾಂತಿ ಮತ್ತು ಸಮೃದ್ಧಿಗೆ ಬೆದರಿಕೆಯಾಗಿದೆ ಎಂದು ಜರ್ಮನಿಯ ಉಪ ಚಾನ್ಸಲರ್ ಸಿಗ್ಮರ್ ಗ್ಯಾಬ್ರಿಯಲ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಬಗ್ಗೆ ಯುರೋಪ್‌ನ ಆಡಳಿತಾರೂಢ ರಾಜಕಾರಣಿಗಳು ದಿನೇ ದಿನೇ ಚಿಂತಿತರಾಗುತ್ತಿದ್ದಾರೆ ಎನ್ನುವುದನ್ನು ಜರ್ಮನಿಯ ಹಣಕಾಸು ಸಚಿವ ಹಾಗೂ ಸೋಶಿಯಲ್ ಡೆಮಾಕ್ರಟ್ಸ್ ಪಕ್ಷದ ನಾಯಕ ಗ್ಯಾಬ್ರಿಯಲ್ ವಕ್ತಪಡಿಸಿರುವ ಕಳವಳ ಸೂಚಿಸುತ್ತದೆ.
‘‘ಡೊನಾಲ್ಡ್ ಟ್ರಂಪ್ ಆಗಲಿ, ಮರೀನ್ ಲೆ ಪೆನ್ ಆಗಲಿ ಅಥವಾ ಗೀರ್ಟ್ ವೈಲ್ಡರ್ಸ್ ಆಗಲಿ- ಈ ಎಲ್ಲ ಬಲಪಂಥೀಯ ಜನಮರುಳು ರಾಜಕಾರಣಿಗಳು ಶಾಂತಿ ಮತ್ತು ಸಾಮಾಜಿಕ ಸ್ಥಿರತೆಗೆ ಬೆದರಿಕೆ ಮಾತ್ರವಲ್ಲ, ಆರ್ಥಿಕ ಅಭಿವೃದ್ಧಿಗೂ ಅಡ್ಡಗಾಲು ಹಾಕುತ್ತಾರೆ’’ ಎಂದು ‘ವೆಲ್ಟ್ ಆಮ್ ಸೋಂಟಾಗ್’ ಪತ್ರಿಕೆಯಲ್ಲಿ ರವಿವಾರ ಪ್ರಕಟಗೊಂಡ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟ್ರಂಪ್ ಮತ್ತು ಫ್ರಾನ್ಸ್‌ನ ಲೆ ಪೆನ್ ‘‘ಕಾಲ್ಪನಿಕ ಜಗತ್ತೊಂದಕ್ಕೆ’’ ಮತದಾರರನ್ನು ಕರೆದೊಯ್ಯುತ್ತಾರೆ. ಅವರ ಈ ಕಾಲ್ಪನಿಕ ಜಗತ್ತಿನಲ್ಲಿ ಆರ್ಥಿಕ ಚಟುವಟಿಕೆಗಳು ರಾಷ್ಟ್ರೀಯ ಗಡಿಯೊಳಗೆ ಮಾತ್ರ ನಡೆಯುತ್ತವೆ. ಆದರೆ, ಇಂಥ ಪ್ರತ್ಯೇಕಿತ ಆರ್ಥಿಕತೆಗಳಿಗೆ ಬೆಳೆಯುವ ಅವಕಾಶ ಕಡಿಮೆ ಎನ್ನುವುದನ್ನು ಇತಿಹಾಸ ತೋರಿಸಿಕೊಟ್ಟಿದೆ ಎಂದು ಗ್ಯಾಬ್ರಿಯಲ್ ನುಡಿದಿದ್ದಾರೆ.
‘‘ನ್ಯಾಯೋಚಿತವಾಗಿ ಜಾಗತೀಕರಣ ಹೇಗೆ ರೂಪುಗೊಳ್ಳಲು ನಾವು ಬಯಸುತ್ತೇವೆ ಎನ್ನುವುದನ್ನು ವಿವರಿಸಲು ನಾವು ಪ್ರಯತ್ನಿಸಬೇಕು’’ ಎಂದರು.
ನಿರಾಶ್ರಿತರನ್ನು ತನ್ನ ದೇಶಕ್ಕೆ ಸ್ವಾಗತಿಸುವ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್‌ರ ನೀತಿಯನ್ನು ‘‘ಹುಚ್ಚುತನದ್ದು’’ ಎಂಬುದಾಗಿ ಟ್ರಂಪ್ ಈಗಾಗಲೇ ಜರೆದಿರುವುದನ್ನು ಸ್ಮರಿಸಬಹುದಾಗಿದೆ.
ಲೂಸಿಯಾನದಲ್ಲಿ ಟ್ರಂಪ್, ಹಿಲರಿಗೆ ಜಯ
ವಾಶಿಂಗ್ಟನ್, ಮಾ. 6: ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಟೆಡ್ ಕ್ರೂಝ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬರ್ನೀ ಸ್ಯಾಂಡರ್ಸ್ ಶನಿವಾರ ಮಹತ್ವದ ವಿಜಯಗಳನ್ನು ಸಂಪಾದಿಸಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ತಮ್ಮ ತಮ್ಮ ಪಕ್ಷದ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಸ್ಪರ್ಧೆಯಲ್ಲಿ ವಿವಾದಾತೀತ ಮುಂಚೂಣಿಗರಾಗಿದ್ದಾರೆ.
ರಿಪಬ್ಲಿಕನ್ ಟ್ರಂಪ್ ಮತ್ತು ಡೆಮಾಕ್ರಟ್ ಹಿಲರಿ ಲೂಸಿಯಾನ ರಾಜ್ಯದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಇದು ಅಧ್ಯಕ್ಷೀಯ ಚುನಾವಣೆಯ ಮಹತ್ವದ ಘಟ್ಟದಲ್ಲಿ ಅವರನ್ನು ಇತರರಿಗಿಂತ ಮುಂದಿರಿಸಿದೆ.
ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹಂಚಿ ಹೋಯಿತು. ಕ್ಯಾನ್ಸಸ್ ಮತ್ತು ಮೇನ್ ರಾಜ್ಯಗಳಲ್ಲಿ ಕ್ರೂಝ್ ವಿಜಯಿಯಾದರು. ಇದು, ತಾನು ಬಿಲಿಯಾಧಿಪತಿ ಟ್ರಂಪ್‌ಗೆ ನಿಕಟ ಸ್ಪರ್ಧೆ ನೀಡಬಲ್ಲೆ ಎಂಬ ಕ್ರೂಝ್‌ರ ಹೇಳಿಕೆಗೆ ಬಲ ಒದಗಿಸಿತು.
ಅದೇ ವೇಳೆ, ಟ್ರಂಪ್ ಲೂಸಿಯಾನ ಮತ್ತು ಕೆಂಟುಕಿಗಳಲ್ಲಿ ಮುನ್ನಡೆ ಗಳಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದಲ್ಲಿ, ಬರ್ನೀ ಸ್ಯಾಂಡರ್ಸ್ ಕ್ಯಾನ್ಸಸ್, ಮೇನ್ ಮತ್ತು ನೆಬ್ರಾಸ್ಕದಲ್ಲಿ ವಿಜಯ ದಾಖಲಿಸಿದರು.
ಆದರೆ, ಲೂಸಿಯಾನದಲ್ಲಿ ಹಿಲರಿ ಸ್ಪಷ್ಟ ವಿಜಯವನ್ನು ಗಳಿಸಿದರು.