ಜಿನೇವಾ ಮಾತುಕತೆಯಲ್ಲಿ ಪಾಲ್ಗೊಳ್ಳಲು ಸಿರಿಯ ಬಂಡುಕೋರರ ಸಮ್ಮತಿ
ಬೈರೂತ್,ಮಾ.7: ಅಂತರ್ಯುದ್ಧದಿಂದ ಜರ್ಜರಿತವಾದ ಸಿರಿಯಕ್ಕೆ ಸಂಬಂಧಿಸಿ ದ ವಿಶ್ವಸಂಸ್ಥೆ ಪ್ರಾಯೋಜಿತ ಶಾಂತಿ ಮಾತುಕತೆಯ ನೂತನ ಸುತ್ತಿನಲ್ಲಿ ಪಾಲ್ಗೊಳ್ಳಲು ಸಿರಿಯದ ಪ್ರತಿಪಕ್ಷಗಳು ಸೋಮವಾರ ಸಮ್ಮತಿಸಿವೆ. ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ಆಳ್ವಿಕೆ ಹಾಗೂ ಐಸಿಸ್ ಹೊರತುಪಡಿಸಿದ ಬಂಡುಕೋರರ ಮಧ್ಯೆ ರಶ್ಯ ಹಾಗೂ ಅಮೆರಿಕ ಮಧ್ಯಸ್ಥಿಕೆಯಲ್ಲಿ ಫೆ.27ರಂದು ಕದನವಿರಾಮ ಏರ್ಪಟ್ಟಿತ್ತು. ಇದರೊಂದಿಗೆ ಐದು ವರ್ಷಗಳಷ್ಟು ಹಳೆಯದಾದ ಸಿರಿಯ ಹಿಂಸಾಚಾರದಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.,
ಸಿರಿಯದ ಬಂಡುಕೋರರನ್ನು ಪ್ರತಿನಿಧಿಸುತ್ತಿರುವ ರಿಯಾದ್ ಮೂಲದ ಉನ್ನತ ಮಾತುಕತೆಗಳ ಸಮಿತಿಯು ಇಂದಿಲ್ಲಿ ಹೇಳಿಕೆಯೊಂದನ್ನು ನೀಡಿ, 10 ದಿನಗಳ ಹಿಂದೆ ಕದನವಿರಾಮ ಏರ್ಪಟ್ಟ ಬಳಿಕ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆಕಂಡುಬಂದಿದೆಯೆಂದು ಹೇಳಿದೆ. ಬಂಡುಕೋರರ ಉನ್ನತ ಮಾತುಕತೆಗಳ ಸಮಿತಿಯು ಜಿನೇವಾದಲ್ಲಿ ಶಾಂತಿಮಾತುಕತೆ ನಡೆಸಲು ಸಮ್ಮತಿಸಿದೆ. ನಿಯೋಗವು ಶುಕ್ರವಾರ ಜಿನೇವಾಕ್ಕೆ ಆಗಮಿಸಲಿದೆಯೆಂದು ಸಂಘಟನೆಯ ವಕ್ತಾರ ರಿಯಾದ್ ನಾಸನ್ ಆಘಾ ತಿಳಿಸಿದ್ದಾರೆ.