ಐಸಿಸ್ ಉಗ್ರರಿಗೆ ಚಿತ್ರಹಿಂಸೆ ನೀಡುವ ಕಾನೂನು ಜಾರಿಗೆ ಟ್ರಂಪ್ ಪ್ರತಿಪಾದನೆ
ವಾಷಿಂಗ್ಟನ್, ಮಾ.7: ಉಗ್ರಗಾಮಿಗಳಿಗೆ ಜಲಚಿತ್ರಹಿಂಸೆ ನೀಡುವ (ವಾಟರ್‌ಬೋರ್ಡಿಂಗ್) ಹಾಗೂ ವಿಸ್ತೃತ ವಿಚಾರಣಾ ವಿಧಾನಗಳನ್ನು ನಿಷೇಧಿಸುವ ಕಾನೂನಿನ ಬದಲಾವಣೆಗೆ ಅಮೆರಿಕದ ಅಧ್ಯಕ್ಷನಾದರೆ ಒತ್ತಡ ತರುವುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ವಿಸ್ತೃತ ವಿಚಾರಣೆಗೆ ತಡೆ ಇರುವುದರಿಂದ ಐಸಿಸ್ ಉಗ್ರರ ವಿರುದ್ಧ ನಮಗೆ ಹಿನ್ನಡೆಯಾಗಿದೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ. ಕಳೆದ ವಾರ ಟ್ರಂಪ್ ನೀಡಿದ ಸರಣಿ ಸಂದರ್ಶನಗಳಲ್ಲಿ ಮತ್ತು ಭಾಷಣಗಳಲ್ಲಿ, ತೀರಾ ಸಡಿಲ ಹಾಗೂ ಸ್ಥಿತಿಸ್ಥಾಪಕತ್ವ ಹೊಂದಿರುವ ತತ್ವಗಳನ್ನು ಬದಲಿಸಿ, ಅಮೆರಿಕದ ವಿದೇಶಾಂಗ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ರಿಪಬ್ಲಿಕನ್ ನೇತೃತ್ವದ ಕಾಂಗ್ರೆಸ್ ಕ್ರಮಗಳಿಗೆ ತಡೆ ಒಡ್ಡಬೇಕಿದೆ ಎಂದು ಹೇಳಿದ್ದಾರೆ. ಜಲ ಚಿತ್ರಹಿಂಸೆ (ಆರೋಪಿ ಮುಖಕ್ಕೆ ಫ್ಯಾಬ್ರಿಕ್ ಬಟ್ಟೆ ಹಾಕಿ, ಮೇಲಿನಿಂದ ರಭಸವಾಗಿ ನೀರು ಸುರಿಸುವುದು. ಬಟ್ಟೆ ಒದ್ದೆಯಾಗಿ ಆತನಿಗೆ ಉಸಿರುಗಟ್ಟಿ, ನೀರಿನಲ್ಲಿ ಮುಳುಗುವ ಅನುಭವ ಆಗುತ್ತದೆ. ಮತ್ತಷ್ಟು ಚಿತ್ರಹಿಂಸೆಯ ಭಯದಿಂದ ಆತ ಸತ್ಯ ಹೇಳುತ್ತಾನೆ ಎಂಬ ಸಿದ್ಧಾಂತ) ಯನ್ನು ಪುನರಾರಂಭಿಸುವ ಜತೆಗೆ ಶಂಕಿತ ಉಗ್ರರ ಪತ್ನಿ ಹಾಗೂ ಮಕ್ಕಳನ್ನೂ ಹತ್ಯೆ ಮಾಡುವುದನ್ನು ಪ್ರತಿಪಾದಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾದಂತಾಗುತ್ತದೆ ಎಂದರು.