ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 17 ಬಲಿ
Update: 2016-03-07 23:24 IST
ಪೇಶಾವರ,ಮಾ.7: ವಾಯವ್ಯ ಪಾಕಿಸ್ತಾನದ ನಗರ ಪೇಶಾವರದ ನ್ಯಾಯಾಲಯವೊಂದರಲ್ಲಿ ನಡೆದ ಆತ್ಮಹತ್ಯಾಬಾಂಬ್ ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಹಾಗೂ 26 ಮಂದಿ ಗಾಯಗೊಂಡಿದ್ದಾರೆ.
ಖೈಬರ್‌ಫಖ್ತೂನ್‌ವಾಲಾ ಪ್ರಾಂತ್ಯದ ಚಾರ್ಸಡ್ಡಾ ಜಿಲ್ಲೆಯ ಶಬ್‌ಖದರ್ ಬಝಾರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯಾಬಾಂಬರ್ ತನ್ನನ್ನೇ ತಾನು ಸ್ಫೋಟಿಸಿಕೊಂಡನೆಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 17 ಮಂದಿ ಮೃತಪಟ್ಟಿದ್ದು, ಇತರ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ತೆಹ್ರಿಕ್ ತಾಲಿಬಾನ್‌ನ ಬಂಡುಕೋರ ಗುಂಪಾದ ಜಮಾಅತುಲ್ ಅಹ್ರಾರ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ತಾಸೀರ್ ಅವರ ಹಂತಕ ಮುಮ್ತಾಝ್ ಖಾದ್ರಿಯನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಅದು ಹೇಳಿದೆ.