ಬ್ರಿಟನ್ ವೀಸಾ ಶುಲ್ಕ ಹೆಚ್ಚಳ ಸಾಧ್ಯತೆ
ಲಂಡನ್, ಮಾ.7: ವೀಸಾ ಶುಲ್ಕ ಹೆಚ್ಚಳದ ಸರದಿ ಇದೀಗ ಬ್ರಿಟನ್ ದೇಶದ್ದು. ಎಲ್ಲ ವರ್ಗದ ವೀಸಾಗಳ ಶುಲ್ಕವನ್ನು ಮಾರ್ಚ್ 18ರಿಂದ ಜಾರಿಗೆ ಬರುವಂತೆ ಏರಿಸಲು ಬ್ರಿಟನ್ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಇದು ಬ್ರಿಟನ್‌ನಲ್ಲಿ ಉದ್ಯೋಗ ನಿರ್ವಹಿಸುವ ಮತ್ತು ವಾಸಿಸುವ ಭಾರತೀಯ ಮೂಲದವರಿಗೆ ದೊಡ್ಡ ಹೊರೆಯಾಗಲಿದೆ. ಏಕೆಂದರೆ ಕಳೆದ ವರ್ಷ ಬ್ರಿಟನ್‌ನಲ್ಲಿ ಭಾರತ ಮೂಲದ ಕೌಶಲಯುಕ್ತ ಸಿಬ್ಬಂದಿಗೆ ಅತಿದೊಡ್ಡ ಸಂಖ್ಯೆಯಲ್ಲಿ ವೀಸಾ ನೀಡಲಾಗಿತ್ತು.
ವೀಸಾ ಶುಲ್ಕ ಹೆಚ್ಚಳದ ಪ್ರಸ್ತಾವವನ್ನು ಜನವರಿಯಲ್ಲಿ ಮುಂದಿಡಲಾಗಿತ್ತು. ಪ್ರವಾಸ ವೀಸಾ ಹಾಗೂ ಅಲ್ಪಾವಧಿ ಭೇಟಿ, ಉದ್ಯೋಗ ಅಥವಾ ಅಧ್ಯಯನ ವೀಸಾದ ಶುಲ್ಕವನ್ನು ಶೇಕಡ 2ರಷ್ಟು ಹೆಚ್ಚಿಸಲಾಗಿದೆ. ರಾಷ್ಟ್ರೀಯತೆ ಹಾಗೂ ನೆಲೆ ನಿಲ್ಲುವ ಅರ್ಜಿಗಳ ವೀಸಾ ಶುಲ್ಕವನ್ನು ಶೇಕಡ 25ರಷ್ಟು ಹೆಚ್ಚಿಸಲಾಗಿದೆ.
ಈ ಶುಲ್ಕ ಏರಿಕೆ ಕ್ರಮದಿಂದಾಗಿ ದೇಶದ ತೆರಿಗೆ ಪಾವತಿದಾರರ ಮೇಲೆ ಬೀಳುವ ಗಡಿ, ವಲಸೆ ಬರುವುದು ಹಾಗೂ ಪೌರತ್ವದ ಹೊರೆಗಳು ಕಡಿಮೆಯಾಗಲಿವೆ. 2019-20ರ ವೇಳೆಗೆ ಇಡೀ ವೆಚ್ಚವನ್ನು ಬಳಕೆದಾರರೇ ಭರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಕಚೇರಿ ಪ್ರಕಟಿಸಿದೆ.
ಈ ಕ್ರಮದಿಂದ ಗೃಹ ಕಚೇರಿ ಸ್ವಯಂ ನಿಧಿ ವ್ಯವಸ್ಥೆಯನ್ನು ಹೊಂದಲಿದ್ದು, ಇಲಾಖೆ ಸ್ಪರ್ಧಾತ್ಮಕ ಗುಣಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಆದಾಗ್ಯೂ, ವ್ಯಾಪಾರ, ವಲಸೆ ಹಾಗೂ ಪ್ರವಾಸಿಗಳಿಗೆ ಆಕರ್ಷಕವಾಗಿಯೇ ಶುಲ್ಕ ಮುಂದುವರಿಯಲಿದೆ ಎಂದು ಸಚಿವಾಲಯದ ಪ್ರಕಟನೆ ಹೇಳಿದೆ.
ಕಳೆದ ವರ್ಷ ಉದ್ಯೋಗ ಹಾಗೂ ವಾಸದ ವೀಸಾ ಪಡೆದವರಲ್ಲಿ ಅತಿಹೆಚ್ಚಿನ ಮಂದಿ ಭಾರತೀಯ ಕೌಶಲಯುಕ್ತ ಉದ್ಯೋಗಿಗಳು. 2015ರಲ್ಲಿ ಮಂಜೂರು ಮಾಡಲಾದ 92,062 ವೀಸಾಗಳ ಪೈಕಿ ಸಿಂಹಪಾಲನ್ನು ಭಾರತೀಯರು ಪಡೆದಿದ್ದಾರೆ. ಉದ್ಯೋಗ ವೀಸಾದಲ್ಲಿ ಶೇಕಡ 57 ಪಾಲನ್ನು ಭಾರತೀಯ ಕೌಶಲಯುಕ್ತ ಉದ್ಯೋಗಿಗಳು ಪಡೆದಿದ್ದಾರೆ. 92,062 ವೀಸಾಗಳ ಪೈಕಿ 52,360 ಮಂದಿ ಭಾರತೀಯರು ಬ್ರಿಟನ್ ವೀಸಾ ಪಡೆದಿದ್ದಾರೆ.