ಇಶ್ರತ್ ನಕಲಿ ಎನ್‌ಕೌಂಟರ್ ಆರೋಪಿಗಳ ರಕ್ಷಣೆಗೆ ಕೇಂದ್ರದ ಯತ್ನ: ಐಪಿಎಸ್ ಸತೀಶ್ ವರ್ಮ
ಹೊಸದಿಲ್ಲಿ , ಮಾ 7 : ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಎದುರಿಸುತ್ತಿರುವ ಆರೋಪಿಗಳನ್ನು ಹಾಗೂ ತನಿಖೆಯ ಬಳಿಕ ಆರೋಪ ಎದುರಿಸಲಿರುವ ಸಂಭಾವ್ಯರನ್ನು ರಕ್ಷಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಪ್ರಕರಣದ ತನಿಖೆ ನಡೆಸಿದ ಐಪಿಎಸ್ ಅಧಿಕಾರಿ ಸತೀಶ್ ವರ್ಮ ಅವರು ಹೇಳಿಕೆ ನೀಡಿದ್ದಾರೆ. ಅಹ್ಮದಾಬಾದ್ ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಾರ್ಚ್ 2 ರಂದು ಅರ್ಜಿ ಸಲ್ಲಿಸಿರುವ ವರ್ಮ ಈ ಆರೋಪ ಮಾಡಿದ್ದು, ಪ್ರಕರಣದ ಎರಡನೆ ದೋಷಾರೋಪ ಪಟ್ಟಿ ಹಾಗೂ ತನ್ನ ಅಧೀನದ ಅಧಿಕಾರಿಗಳ ವಿಚಾರಣೆಗೆ ನಿರಾಕರಿಸಿ ಕೇಂದ್ರ ಸರಕಾರ ನೀಡಿರುವ ಆದೇಶದ ದೃಡೀಕೃತ ಪ್ರತಿಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ. ಇಶ್ರತ್ ಗೆ ಲಷ್ಕರೆ ತಯ್ಯಿಬಾ ಜೊತೆ ಯಾವುದೇ ರೀತಿಯ ಸಂಪರ್ಕ ಇರಲಿಲ್ಲ ಹಾಗೂ ಆಕೆಯನ್ನು ಪೂರ್ವಯೋಜಿತವಾಗಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಎಂದು ಇತ್ತೀಚಿಗೆ ಸತೀಶ್ ವರ್ಮ ಹೇಳಿದ್ದರು. ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎರಡನೇ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಕೇಂದ್ರ ಸರಕಾರದ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ವಿಚಾರಣೆಗೆ ಕೇಂದ್ರ ಸರಕಾರ ಅನುಮತಿ ನೀಡಲಿಲ್ಲ. ಹೀಗೆ ಮಾಡುವುದು ಕಾನೂನು ಬಾಹಿರವಾಗಿದೆ. ಈಗ ಈ ಪ್ರಕರಣದ ಸಾಕ್ಷಿಯಾಗಿರುವ ಆರ್.ವಿ.ಎಸ್.ಮಣಿ ಹಾಗು ಆರೋಪಿಯಾಗಿರುವ ಐ.ಬಿ.ಅಧಿಕಾರಿ ರಾಜೇಂದರ್ ಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಇಡೀ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಹಾಗೂ ನ್ಯಾಯದಾನ ಆಗದಂತೆ ತಡೆಯಲು ಪ್ರಯತ್ನ ನಡೆಯುತ್ತಿದೆ ಎಂಬ ಬಲವಾದ ಗುಮಾನಿ ಬರುತ್ತದೆ ಎಂದು ವರ್ಮ ಆರೋಪಿಸಿದ್ದರು. ವರ್ಮ ಈಗ ಶಿಲ್ಲಾಂಗ್ ನಲ್ಲಿ ಕೇಂದ್ರ ಸರಕಾರದ ಅಧೀನದ ನೀಪ್ಕೋ ದಲ್ಲಿ ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿದ್ದಾರೆ.