×
Ad

ಅಕ್ಟೋಬರ್ 20,2016 ಉತ್ಪಾದನಾ ದಿನಾಂಕವಿರುವ ಪತಂಜಲಿ ಆಮ್ಲಾ ಮುರಬ್ಬಾ ಮಾರುಕಟ್ಟೆಯಲ್ಲಿ!

Update: 2016-03-07 23:47 IST

ಲಕ್ನೊ, ಮಾ.7: ಅಕ್ಟೋಬರ್ ಬರಲು ಇನ್ನೂ ಏಳು ತಿಂಗಳಿದ್ದರೂ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪೆನಿ ಉತ್ಪಾದಿಸಿದ ಆಮ್ಲಾ ಮುರಬ್ಬಾದ ಒಂದು ಕೆ.ಜಿ.ಯ ಎರಡು ಪ್ಯಾಕೆಟುಗಳಲ್ಲಿ ಉತ್ಪಾದನಾ ದಿನಾಂಕವನ್ನು ಅಕ್ಟೋಬರ್ 20,2016 ಎಂದು ನಮೂದಿಸಲಾಗಿದೆ. ಈ ಪ್ಯಾಕೆಟ್‌ಗಳನ್ನು ಆಹಾರ ಸುರಕ್ಷೆ ಹಾಗೂ ಡ್ರಗ್ ಎಡ್ಮಿನಿಸ್ಟ್ರೇಶನ್ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈ ಪ್ಯಾಕೆಟ್‌ಗಳಲ್ಲಿ ಎಕ್ಸ್‌ಪೈರಿ ದಿನಾಂಕವನ್ನು ಅಕ್ಟೋಬರ್ 19, 2017 ಎಂದು ನಮೂದಿಸಲಾಗಿದೆ. ಈ ಪ್ಯಾಕೆಟ್‌ಗಳನ್ನು ಕಲ್ಯಾಣ್‌ಪುರ್ ರಿಂಗ್ ರೋಡ್‌ನಲ್ಲಿರುವ ರಿಟೇಲ್ ಅಂಗಡಿಯೊಂದರಲ್ಲಿ ಪತ್ತೆ ಹಚ್ಚಲಾಗಿತ್ತು.

ಇದೊಂದು ಆಯುರ್ವೇದದ ಉತ್ಪನ್ನವಾಗಿರುವುದರಿಂದ ಇದನ್ನು ಆಹಾರ ಉತ್ಪನ್ನವೆಂದು ಪರಿಗಣಿಸಲಾಗುವುದಿಲ್ಲ ಎಂದು ಎಫ್‌ಎಸ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಮಯ ಅಧಿಕಾರಿಗಳು ಪತಂಜಲಿಯ ಸೋನ್ ಪಾಪ್ಡಿ, ದನದ ಹಾಲಿನಿಂದ ತಯಾರಿಸಿದ ತುಪ್ಪ ಹಾಗೂ ಅರಶಿನ ಹುಡಿಯ ಸ್ಯಾಂಪಲ್ಲುಗಳನ್ನು ಕೂಡ ಅವುಗಳಗುಣಮಟ್ಟ ಪರೀಕ್ಷೆಗಾಗಿ ನಗರದ ಐದು ವಿವಿಧ ಅಂಗಡಿಗಳಿಂದ ತೆಗೆದುಕೊಂಡು ಹೋಗಿದ್ದಾರೆ.

‘‘ಒಂದು ಉತ್ಪನ್ನದ ಬಗ್ಗೆ ತಪ್ಪು ಮಾಹಿತಿ ನೀಡುವುದು ಡ್ರಗ್ ಆ್ಯಂಡ್ ಕಾಸ್ಮೆಟಿಕ್ ಆ್ಯಕ್ಟ್ ಇದರ ಉಲ್ಲಂಘನೆಯಾಗುತ್ತದೆ,’’ ಎಂದು ಉತ್ತರ ಪ್ರದೇಶ ಆಯುರ್ವೇದ ನಿರ್ದೇಶನಾಲಯದ ಡ್ರಗ್ ಇನ್‌ಸ್ಪೆಕ್ಟರ್ ಡಾ. ಶಿವಕುಮಾರ್ ವರ್ಮ ಹೇಳಿದ್ದಾರೆ. ಸೀಲ್ ಮಾಡಲ್ಪಟ್ಟ ಉತ್ಪನ್ನದ ಸ್ಯಾಂಪಲ್ಲನ್ನು ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆಯೆಂದು ಅವರು ಹೇಳಿದ್ದು ಈ ವಿಚಾರದ ಬಗ್ಗೆ ಮಾಹಿತಿಯನ್ನು ಉತ್ತರಖಂಡದ (ಡೆಹ್ರಾಡೂನ್) ಆಯುರ್ವೇದಿಕ್ ಸರ್ವಿಸಸ್ ನಿರ್ದೇಶಕರಿಗೂ ಕಳುಹಿಸಲಾಗಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News