×
Ad

ಐಎನ್‌ಎಸ್ ವಿರಾಟ್‌ನಲ್ಲಿ ಬೆಂಕಿ: ಓರ್ವ ನಾವಿಕ ಮೃತ್ಯು

Update: 2016-03-07 23:50 IST

ಹೊಸದಿಲ್ಲಿ,ಮಾ.7: ಗೋವಾದಲ್ಲಿರುವ,ಶೀಘ್ರವೇ ಭಾರತೀಯ ನೌಕಾಪಡೆಯ ಸೇವೆಯಿಂದ ಮುಕ್ತಗೊಳ್ಳಲಿರುವ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್‌ನಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದ್ದು,ಓರ್ವ ನಾವಿಕ ಮೃತಪಟ್ಟಿದ್ದಾನೆ. ಇತರ ಮೂವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ ನೌಕೆಯ ಬಾಯ್ಲರ್ ರೂಮ್‌ಗಳ ಪೈಕಿ ಒಂದರಲ್ಲಿ ‘ಸಣ್ಣದಾಗಿ ಬೆಂಕಿ’ ಕಾಣಿಸಿಕೊಂಡಿತ್ತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದರು. ಬೆಂಕಿಯನ್ನು ಶೀಘ್ರವೇ ನಿಯಂತ್ರಣಕ್ಕೆ ತರಲಾಯಿತಾದರೂ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ನಾಲ್ವರು ನಾವಿಕರಿಗೆ ಸುಟ್ಟ ಗಾಯಗಳಾಗಿದ್ದವು. ಈ ಪೈಕಿ ಚೀಫ್ ಇಂಜಿನಿಯರ್ ಮೆಕ್ಯಾನಿಕ್ ಆಶು ಸಿಂಗ್ ಅವರನ್ನು ಗೋವಾದ ನೌಕಾಪಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದರು.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಎರಡು ವಿಮಾನ ವಾಹಕ ನೌಕೆಗಳಲ್ಲೊಂದಾಗಿರುವ ಐಎನ್‌ಎಸ್ ವಿರಾಟ್ ಶೀಘ್ರವೇ ಮುಂಬೈಗೆ ಮರಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News