ಅಂಬಲಪಾಡಿಯಲ್ಲಿದ್ದದ್ದು ‘ಕ್ಯಾಟಲ್ ಪಾಸ್’: ಕೆ.ಜಯಪ್ರಕಾಶ್ ಹೆಗ್ಡೆ

Update: 2016-03-07 18:41 GMT

ಉಡುಪಿ, ಮಾ.7: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ನಿರ್ಮಾಣದಲ್ಲಿ ಅಂಬಲಪಾಡಿ ಬೈಪಾಸ್ ಬಳಿ ಮೂಲ ಯೋಜನೆಯಲ್ಲಿದ್ದುದು 3.5 ಮೀ. ಅಗಲದ ಕ್ಯಾಟಲ್ ಪಾಸ್ ಮಾತ್ರ, ಅಂಡರ್‌ಪಾಸ್ ಅಲ್ಲ. ಅದರಿಂದ ವಾಹನನಿಬಿಡ ಪ್ರದೇಶದಲ್ಲಿ ಜನರ ಸಂಚಾರಕ್ಕೆ ಭಾರೀ ಅನಾನುಕೂಲವಾಗುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಾನು ಸುಗಮ ಸಂಚಾರಕ್ಕಾಗಿ ಫುಟ್ ಓವರ್‌ಬ್ರಿಜ್ ರಚಿಸುವಂತೆ ಆಗಿನ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್‌ಗೆ ಮನವಿ ಮಾಡಿಕೊಂಡಿದ್ದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಅಂಬಲಪಾಡಿ ಹೆದ್ದಾರಿ ಹೋರಾಟ ಸಮಿತಿ ತನ್ನ ಮೇಲೆ ಮಾಡಿರುವ ಆರೋಪದ ಕುರಿತು ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯವಾಗಿತ್ತು ಎಂದರು. ಇನ್ನೂ ನಿರ್ಧಾರ ಮಾಡಿಲ್ಲ: ತನ್ನ ಮುಂದಿನ ರಾಜಕೀಯದ ಕುರಿತು ಯಾವುದೇ ಅಂತಿಮ ನಿರ್ಧಾರ ಇನ್ನೂ ಮಾಡಿಲ್ಲ ಎಂದು ಹೇಳಿದ ಹೆಗ್ಡೆ, ಕಳೆದ ಎಂಎಲ್‌ಸಿ ಚುನಾವಣಾ ಫಲಿತಾಂಶ ಬಂದ ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ ತನ್ನ ಬಳಿ ಬಂದು ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದ್ದರು. ಮುಖ್ಯಮಂತ್ರಿ ಮನವಿ ಮಾಡಿದರೆ ಪಕ್ಷಕ್ಕೆ ಮರಳುತ್ತೀರಾ ಎಂದು ಕೇಳಿದ್ದರು. ನೀವು ಬೇರೆ ಪಕ್ಷ ಸೇರಿದರೆ ನಾವೆಲ್ಲ ಮುಳುಗುತ್ತೇವೆ ಎಂದೂ ಹೇಳಿದ್ದರು ಎಂದರು.

ಕಿಶೋರ್ ಶೆಟ್ಟಿ, ಪ್ರಶಾಂತ್ ಕಲ್ಮಾಡಿ, ಅನುಪ್ ಶೆಟ್ಟಿ ಹಾಗೂ ಗಾಡ್ವಿನ್ ಮಿನೇಜಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News