ನವೋನ್ವೇಷಣೆ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಗಾಗಿ ಜೆಎನ್‌ಯುಗೆ ರಾಷ್ಟ್ರಪತಿಗಳ ಪ್ರತಿಷ್ಠಿತ ಪ್ರಶಸ್ತಿ

Update: 2016-03-08 14:30 GMT

 ಹೊಸದಿಲ್ಲಿ,ಮಾ.8: ಕೇಂದ್ರೀಯ ವಿವಿಗಳ ‘ವಿಸಿಟರ್’ ಆಗಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಕಳೆದ ವರ್ಷ ಸ್ಥಾಪಿಸಿರುವ ಮೂರು ವಿಸಿಟರ್ಸ್ ಆವಾರ್ಡ್‌ಗಳ ಪೈಕಿ ಎರಡನ್ನು ಇಲ್ಲಿಯ ಜವಾಹರಲಾಲ ನೆಹರು ವಿವಿಯು ಗೆದ್ದುಕೊಂಡಿದೆ. ವಿವಿಯನ್ನು ‘ದೇಶದ್ರೋಹ ಕೇಂದ್ರ’ ಎಂದು ಕೆಲವರು ಬಣ್ಣಿಸುತ್ತಿರುವ ಸಂದರ್ಭದಲ್ಲೇ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಿದೆ.

ಜೆಎನ್‌ಯು ‘ನವೋನ್ವೇಷಣೆ’ಮತ್ತು ‘ಸಂಶೋಧನೆ’ವಿಭಾಗಗಳಲ್ಲಿ ಬಹುಮಾನಕ್ಕೆ ಪಾತ್ರವಾಗಿದ್ದರೆ,ಅಸ್ಸಾಮಿನ ತೇಜಪುರ ವಿವಿಯು ‘ಅತ್ಯುತ್ತಮ ವಿಶ್ವವಿದ್ಯಾನಿಲಯ’ ಗೌರವಕ್ಕೆ ಪಾತ್ರವಾಗಿದೆ ಎಂದು ರಾಷ್ಟ್ರಪತಿ ಭವನವು ಪ್ರಕಟನೆಯಲ್ಲಿ ತಿಳಿಸಿದೆ.

ತೇಜಪುರ ವಿವಿಯು 2015ನೇ ಸಾಲಿನಲ್ಲಿ ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡರೆ ಜೆಎನ್‌ಯು ಬೋಧಕ ರಾಕೇಶ್ ಭಟ್ನಾಗರ್ ಮತ್ತು ದಿಲ್ಲಿ ಇನಸ್ಟಿಟ್ಯೂಟ್‌ನ ಅಣುಸಂಬಂಧಿ ಪರೋಪಜೀವಿ ಶಾಸ್ತ್ರಜ್ಞರ ಗುಂಪು ನವೋನ್ವೇಷಣೆ ಮತ್ತು ಸಂಶೋಧನೆಗಾಗಿ ಪ್ರಶಸ್ತಿಯ ಪಾಲುದಾರರಾಗಿದ್ದಾರೆ.
ಭಟ್ನಾಗರ್ ಅಂಥ್ರಾಕ್ಸ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಗೊಳಿಸಿದ್ದರೆ, ಪ್ರೊ.ಅಲೋಕ್ ಭಟ್ಟಾಚಾರ್ಯ ನೇತೃತ್ವದ ದಿಲ್ಲಿ ಇನಸ್ಟಿಟ್ಯೂಟ್ ತಂಡವು ಮಲೇರಿಯಾ,ಅಮೀಬಾ ಮತ್ತು ಕಾಲಾ ಆಜಾರ್ ಪರಾವಲಂಬಿಗಳ ಬಗ್ಗೆ ಸಂಶೋಧನೆ ನಡೆಸಿತ್ತು.

 ಸಂಸತ್ ದಾಳಿಯ ದೋಷಿ ಅಫ್ಝಲ್ ಗುರು ಕುರಿತಂತೆ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಜೆಎನ್‌ಯು ದೇಶದ್ರೋಹ ವಿವಾದದ ಕೇಂದ್ರವಾಗಿರುವಾಗಲೇ ಅದಕ್ಕೆ ಈ ಮನ್ನಣೆ ಸಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಸೋಮವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News