ಅವಳಿ ಮಕ್ಕಳ ತಂದೆಯರು ಭಿನ್ನ!
ಹನೋಯಿ (ವಿಯೆಟ್ನಾಂ), ಮಾ. 8: ಅತ್ಯಂತ ಅಪರೂಪದ ಘಟನೆಯೊಂದರಲ್ಲಿ, ಭಿನ್ನ ತಂದೆಯರನ್ನು ಹೊಂದಿರುವ ಅವಳಿ ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ ಎಂದು ಹನೋಯಿಯಲ್ಲಿರುವ ಡಿಎನ್‌ಎ ಪರೀಕ್ಷಾ ಪ್ರಯೋಗಾಲಯದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ವಿಯೆಟ್ನಾಮಿ ದಂಪತಿಯೊಂದಕ್ಕೆ ಹುಟ್ಟಿದ ಅವಳಿ ಮಕ್ಕಳ ನಡುವೆ ರೂಪದಲ್ಲಿ ಭಾರೀ ವ್ಯತ್ಯಾಸವಿತ್ತು. ಹಾಗಾಗಿ, ಇತ್ತೀಚೆಗೆ ಆ ಮಕ್ಕಳ ಡಿಎನ್‌ಎ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಲಾಗಿತ್ತು.
‘‘ಇದು ವಿಯೆಟ್ನಾಂನಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಅಪರೂಪದ ಘಟನೆಯಾಗಿದೆ’’ ಎಂದು ಲೆ ಡಿನ್ ಲುಯೋಂಗ್ ತಿಳಿಸಿದರು. ಈ ಅವಳಿ ಮಕ್ಕಳ ತಂದೆಯಂದಿರು ಬೇರೆ ಬೇರೆ ಹಾಗೂ ತಾಯಿ ಒಬ್ಬರೇ ಆಗಿದ್ದಾರೆ.
ಒಂದೇ ಋತು ಚಕ್ರದಲ್ಲಿ ಒಂದೇ ಮಹಿಳೆಯ ಎರಡು ಅಂಡಗಳು ಬೇರೆ ಬೇರೆ ಲೈಂಗಿಕ ಕ್ರಿಯೆಯ ವೇಳೆ ಇಬ್ಬರು ಭಿನ್ನ ಪುರುಷರ ವೀರ್ಯದಿಂದ ಫಲಿಸಿದರೆ ಹೀಗಾಗುವ ಸಾಧ್ಯತೆಯಿದೆ ಎಂಬ ವಿವರಣೆಯನ್ನು ಅವರು ನೀಡಿದ್ದಾರೆ.
ತನ್ನ ಹೆಂಡತಿಯ ಅವಳಿ ಮಕ್ಕಳ ಜೈವಿಕ ತಂದೆ ತಾನೇ ಎಂಬುದನ್ನು ಪತ್ತೆಹಚ್ಚುವಂತೆ ಮಹಿಳೆಯ ಗಂಡ ಇತ್ತೀಚೆಗೆ ಮನವಿ ಮಾಡಿದ್ದರು. ಒಂದು ಮಗುವಿನ ರೂಪ ತಂದೆ ಮತ್ತು ಇನ್ನೊಂದು ಮಗುವಿಗಿಂತ ತೀರಾ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಆತನ ಮೇಲೆ ಸಂಬಂಧಿಕರು ಒತ್ತಡ ಹೇರಿದ್ದರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.